Advertisement

ಬೆಳೆ ಹಾನಿ ಪರಿಹಾರ ನೀಡಲು ಆಗ್ರಹ

11:39 AM Aug 27, 2017 | Team Udayavani |

ಆಳಂದ: ಮುಂಗಾರಿನ ಬೆಳೆ ಹಾನಿ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ತಹಶೀಲ್ದಾರ ಕಚೇರಿ ಎದುರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಕಾರ್ಯಕರ್ತರು, ತಾಲೂಕಿನ ಜನರು ಅನೇಕ ಸಮಸ್ಯೆಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಮುಂಗಾರು ಹಂಗಾಮಿನ ಉದ್ದು, ಹೆಸರು, ಎಳ್ಳು ಬೆಳೆ ಉತ್ಪಾದನೆ
ಆಗದೆ ಹಾನಿಯಾದರೂ ತಾಲೂಕು ಆಡಳಿತ ಮತ್ತು ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ಜಲಕ್ಷಾಮ ಉಂಟಾಗಿದೆ. ನೀರಿನ ಬರದಿಂದ ದನ, ಕರು ಕುರಿಗಳು ಆಹಾರವಿಲ್ಲದೆ ಸಾಯುವಂತೆ ಆಗಿದೆ. ಕೂಡಲೇ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶಾಸಕರು ಮುಖ್ಯಮಂತ್ರಿಗಳ ಬ್ಯಾನರ್‌ಗಳನ್ನು ಹಾಕಿ ಮತ್ತು ಪತ್ರಿಕೆಗಳ ಮುಖಾಂತರ ವಿಜ್ಞಾಪನೆಗಳನ್ನು ನೀಡಿ ಆಳಂದಕ್ಕೆ ಸುಮಾರು 600 ಕೋಟಿ ರೂ. ನೀರಾವರಿ ಯೋಜನೆಗೆ ಮೀಸಲಿಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಈ ಬೃಹತ್‌ ಯೋಜನೆಯ ಲಾಭ-ನಷ್ಟಗಳ ಸ್ಪಷ್ಟ ಚಿತ್ರಣವನ್ನು ಆಳಂದ ಜನತೆಗೆ ತಿಳಿಸಬೇಕು. ಈ ನೀರಿನ ಯೋಜನೆಗೆ ಶಾಸಕರು ಹೇಳಿದ ಹಾಗೆ ಅಫಜಲಪುರ ತಾಲೂಕಿನ ಸೊನ್ನ ಡ್ಯಾಂ ಮೂಲಕ ಆಳಂದ ಅಮರ್ಜಾ ಅಣೆಕಟ್ಟೆಗೆ ನೀರು ಹೇಗೆ ಹರಿಸಲು ಮುಂದಾಗಲಾಗಿದೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು. ಅಮರ್ಜಾ ಅಣೆಕಟ್ಟೆಗೆ ಹೇಗೆ ನೀರು ಹರಿಸುತ್ತೀರಿ? ಪೈಪ್‌ಲೈನ್‌ ಅಥವಾ ಕಾಲುವೆಯೋ ಅಥವಾ ಇನ್ಯಾವುದರ ಮುಖಾಂತರವೋ, ಇದರ ವಿಸ್ತಾರ ಎಷ್ಟು ಕಿ.ಮೀ. ಇದೆ? ಎಷ್ಟು ಟಿಎಂಸಿ ಅಡಿ ನೀರು ಅಮರ್ಜಾಕ್ಕೆ ಪ್ರತಿವರ್ಷ ಬರುತ್ತದೆ? ಇದರಿಂದ ಎಷ್ಟು ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಅನುಕೂಲವಾಗುತ್ತದೆ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಎಚ್‌ಕೆಆರ್‌ಡಿಬಿ ಯೋಜನೆಯ ಅಡಿ ತಾಲೂಕಿನಲ್ಲಿ ನಡೆದ ಅನೇಕ ರಸ್ತೆ ಕಾಮಗಾರಿಗಳ ನಾಲೆಗಳು ಕಳಪೆ ಮತ್ತು ಅವೈಜ್ಞಾನಿಕ ಪದ್ಧತಿಯಿಂದ ಕೂಡಿವೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ನೂರಾರು ಮಂದಿ ಕಾರ್ಡ್‌ದಾರರಿಗೆ ಆಹಾರಧಾನ್ಯ ಪೂರೈಕೆ ಮಾಡುವಲ್ಲಿ ಆಡಳಿತ ವಿಫಲವಾಗಿದೆ. ಕೂಡಲೇ ಸಂಬಂಧಿ ತ ಅ ಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪಕ್ಷದ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸಿದ್ದು ಹಿರೋಳಿ, ಜಿಲ್ಲಾ ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ, ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ, ಬಸವರಾಜ ಬ್ಯಾಳಿ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ರಾಜ್ಯ ಕಾರ್ಯಕಾರಣಿ ಸದಸ್ಯ ಶರಣು ಸಜ್ಜನಶೆಟ್ಟಿ, ಸೂರ್ಯಕಾಂತ ಡೋಣಿ, ಸದಸ್ಯ ಸುನಿಲ ಹಿರೋಳಿ, ಆನಂದ ಪಾಟೀಲ ಕೊರಳಿ, ರಾಹುಲ ಬೀಳಗಿ, ಸುಧಾಕರ ಶಿರೋಳ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next