ದೇವದುರ್ಗ: ಬೇಸಿಗೆಯಲ್ಲಿ ಕುಡಿವ ನೀರು, ಮೇವಿನ ಬವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ರೈತರು ಈಗಲೇ ಮೇವು ಖರೀದಿಸುವುದಕ್ಕೆ ಮುಂದಾಗಿದ್ದು, ಬೇಡಿಕೆ ಹೆಚ್ಚಿದೆ. ಜತೆಗೂ ದರವೂ ಹೆಚ್ಚಳವಾಗಿದೆ.
ಕೃಷ್ಣಾ ನದಿ ತೀರ ಸೇರಿದಂತೆ ಇತರೆ ಹೋಬಳಿ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತ ಕಟಾವು ಹಂತದಲ್ಲಿದೆ. ಹಲವೆಡೆ ಕಟಾವು ಮಾಡಲಾಗಿದೆ. ಒಂದು ಟ್ರ್ಯಾಕ್ಟರ್ ಮೇವಿಗೆ 3ರಿಂದ 4 ಸಾವಿರ ಇದ್ದು, ಜಾನುವಾರು ಸಾಕಲು ರೈತರು ಮೇವು ಖರೀದಿಗೆ ಅವರಿವರ ಹತ್ತಿರ ಸಾಲ ಮಾಡುವ ಸ್ಥಿತಿ ಎದುರಾಗಿದೆ.
ಶಹಾಪೂರ, ಲಿಂಗಸುಗೂರು ಸೇರಿದಂತೆ ಇತರೆ ತಾಲೂಕು ವ್ಯಾಪ್ತಿಯ ಹಳ್ಳಿಗಳ ರೈತರು ಮೇವು ಖರೀದಿಗೆ ಮೊರೆ ಹೋಗಿದ್ದಾರೆ. ಎರಡ್ಮೂರು ಎಕರೆ ಜಮೀನು ಹೊಂದಿದ ನೀರಾವರಿ ಸೌಲಭ್ಯ ವಂಚಿತ ಸಣ್ಣ ರೈತರು ಮೇವಿಗಾಗಿ ಅಲೆಯುವಂತಾಗಿದೆ.
ಮಾರ್ಚ್ ಆರಂಭದಲ್ಲೇ ಬಿಸಿಲು ಹೆಚ್ಚಾಗುವ ಸಂಭವವಿರುವುದರಿಂದ ಮೇವಿನ ಅಭಾವ ಉಂಟಾಗುವ ಮೊದಲೇ ಸಂಗ್ರಹಿಸಲಾಗುತ್ತಿದೆ. ಗಣೇಕಲ್, ಗಲಗ, ಜಾಲಹಳ್ಳಿ, ಸುಂಕೇಶ್ವರಹಾಳ, ಮಸರಕಲ್, ಜೋಳದಹೆಡಗಿ, ಹೂವಿನಹೆಡಗಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅತಿ ಹೆಚ್ಚು ಭತ್ತ ನಾಟಿ ಮಾಡಲಾಗುತ್ತಿದೆ. ಹೀಗಾಗಿ ಈ ಪ್ರದೇಶದ ವ್ಯಾಪ್ತಿಯಲ್ಲೇ ಮೇವು ಖರೀದಿಗೆ ಬೇಡಿಕೆ ಹೆಚ್ಚಿದೆ.
ಬೇಸಿಗೆ ವೇಳೆ ತಾಲೂಕಿನ ರೈತರ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಬೇಕು. ಅದರಲ್ಲಿ ಕುಡಿವ ನೀರಿಗೆ ಹೆಚ್ಚು ಆದ್ಯತೆ ನೀಡಬೇಕು.
-ನರಸಣ್ಣ ನಾಯಕ, ಜಾಲಹಳ್ಳಿ, ರೈತ ಮುಖಂಡ
ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಖರೀದಿ ಕೇಂದ್ರ ಆರಂಭಿಸುವ ಕುರಿತು ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ. ಆದೇಶ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ಶ್ರೀನಿವಾಸ ಚಾಪಲ್, ಪ್ರಭಾರ ತಹಶೀಲ್ದಾರ್
-ನಾಗರಾಜ ತೇಲ್ಕರ್