ಅಥಣಿ: ತಾಲೂಕಿನ ಶೇಗುಣಸಿ ಗ್ರಾಮ ಸೇರಿದಂತೆ ಹೊಳೆಸಾಲಿನ ಗ್ರಾಮಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ವಿರೋಧಿಸಿ ರೈತರು ಮತ್ತು ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಹೆಸ್ಕಾಂ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ರಾತ್ರಿ ವೇಳೆ ವಿದ್ಯುತ್ ತೆಗೆದಿದ್ದಾದರೆ, ಮಕ್ಕಳನ್ನು ಕರೆದುಕೊಂಡು ಬಂದು ಹೆಸ್ಕಾಂ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಅಥಣಿ ಕೆ.ಇ.ಬಿ ನವರು ಸುಮಾರು 86 ಕೋಟಿ ರೂ. ನುಂಗಿ ಈಗಾಗಲೇ ಭ್ರಷ್ಟಾಚಾರದಲ್ಲಿ ನಂ. 1 ಆಗಿದ್ದಾರೆ. ಸುಮಾರು ಇಪ್ಪತ್ತು ಜನ ಅಮಾನತುಗೊಂಡು ಇನ್ನೂ ಇಪ್ಪತ್ತು ಜನ ಅಮಾನತುಗೊಳ್ಳಲಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ಒದಗಿಸದೇ ಬೆಳೆಗಳು ಒಣಗುತ್ತಿವೆ. ಸಾಲ ಸೂಲ ಮಾಡಿ ಬೆಳೆದ ಬೆಳೆಗೆ ಸರಿಯಾಗಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಾಗಿ ರೈತಾಪಿ ಜನರಿಗೆ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು. ವಿದ್ಯುತ್ ಕಡಿತ ಮುಂದುವರೆದಲ್ಲಿ ರೈತ ಸಂಘದಿಂದ ಕೆ.ಇ.ಬಿ. ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುಮಾರು ಮೂರು ಗಂಟೆಗಳ ಕಾಲ ರೈತರು ಹಾಗೂ ಅಧಿ ಕಾರಿ ಮಧ್ಯೆ ವಾದ ವಿವಾದ ನಡೆದು ರೈತರು ಹೆಸ್ಕಾಂ ಕಚೇರಿಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿ, ಹತ್ತು ಗಂಟೆ ಕಾಲ ನಿರಂತರ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾಂತೇಶ ಶಿವಮೂರ್ತಿ ಮಾತನಾಡಿ, ಮೇಲಾಧಿಕಾರಿಗಳ ಆದೇಶದಂತೆ ಗ್ರಾಮೀಣ ಭಾಗದಲ್ಲಿ ಏಳು ಗಂಟೆ ಕಾಲ ವಿದ್ಯುತ್ ಒದಗಿಸಲಾಗುತ್ತಿದೆ. ಅದಕ್ಕಿಂತ ಹೆಚ್ಚಿಗೆ ಒದಗಿಸಲು ನಮಗೆ ಅನುಮತಿ ಇಲ್ಲಾ, ತಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ವೇಳೆ ಪರಗೌಂಡ ಪಾಟೀಲ, ರಾವಸಾಬ ಪಾಟೀಲ, ಶ್ರೀಶೈಲ ಬಿರಾದಾರ, ಕುಮಾರ ಹೊರಟ್ಟಿ, ಸಚಿನ ಬುಟಗೌಡರ, ಮಲ್ಲಪ್ಪ ಯಡಹಳ್ಳಿ, ಇರೇಂದ್ರ ಚೌಗಲಾ, ರಾಜಗೌಡಪಾನವರ, ವಿಠ್ಠಲ ಮೇಕ್ಕಳಕಿ, ಮಹೇಶ ಬಿನನಾಳ ಸೇರಿದಂತೆ ಹಲವರು ರೈತರು ಇದ್ದರು.