ಬೆಳಗಾವಿ: ಬೆಳಗಾವಿ-ಧಾರವಾಡ ಕಿತ್ತೂರ ಮಾರ್ಗವಾಗಿ ನೂತನ ರೈಲು ಹಳಿ ನಿರ್ಮಾಣಕ್ಕಾಗಿ ಈ ಹಿಂದೆಯೇ ಸಮೀಕ್ಷೆ ಕಾರ್ಯ ನಡೆದಿದ್ದು, ಅದನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಕೇಂದ್ರ ರೈಲ್ವೆ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ ಸಿಂಗ್ ಅವರನ್ನು ಭೇಟ್ಟಿ ಮಾಡಿ ಮನವಿ ಸಲ್ಲಿಸಿದ ಸಂಸ್ಥೆಯ ಪದಾಧಿಕಾರಿಗಳು ಈಗ ಧಾರವಾಡದಿಂದ ಬೆಳಗಾವಿಗೆ ಲೋಂಡಾ ಮಾರ್ಗವಾಗಿ ರೈಲಿನಲ್ಲಿ ಬರಲು ಸುಮಾರು ಮೂರು ಗಂಟೆ ಬೇಕಾಗುತ್ತಿದೆ. ಅದೇ ಧಾರವಾಡದಿಂದ ಕಿತ್ತೂರ ಮೂಲಕ ಹೊಸ ಮಾರ್ಗ ನಿರ್ಮಾಣ ಮಾಡಿದರೆ ಒಂದು ಗಂಟೆಯ ಪ್ರಯಾಣ ಉಳಿಯುತ್ತದೆ. ಸಾರ್ವಜನಿಕರಿಗೂ ಬಹಳ ಅನುಕೂಲವಾಗುತ್ತದೆ. ಕಾರಣ ಇದನ್ನು ಆಧ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು.
ಇದಲ್ಲದೆ ಈಗಾಗಲೇ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುವ ಬೆಳಗಾವಿ-ಕರಾಡ (ಸಂಕೇಶ್ವರ-ನಿಪ್ಪಾಣಿ ಮಾರ್ಗ) ಮಾರ್ಗ ನಿರ್ಮಾಣ ಕಾರ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ಇದರಿಂದ ಉದ್ಯಮಿಗಳಿಗೆ ಹಾಗೂ ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಗೆ ಬಹಳ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿರುವ ಗುಡ್‌ಸೆಡ್‌ನ್ನು ಸಾಂಬ್ರಾ ಇಲ್ಲವೇ ದೇಸೂರ ಬಳಿ ಸ್ಥಳಾಂತರಿಸಬೇಕು. ಇದರಿಂದ ಸಾಕಷ್ಟು ಜಾಗ ಸಿಗುವದಲ್ಲದೆ ಪ್ಯಾಸೆಂಜರ್ ರೈಲಿಗಾಗಿ ಹೊಸದಾಗಿ ಇನ್ನೊಂದು ಪ್ಲಾಟ್‌ಫಾರ್ಮ್
ಮಾಡಬಹುದು. ಬೆಳಗಾವಿಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಹೊಂದುತ್ತಿದ್ದರೂ ಇನ್ನೂ ಕೆಲವು ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಮುಖ್ಯವಾಗಿ ಎರಡು ಹಾಗೂ ಮೂರನೇ ಪ್ಲಾಟ್ ಫಾರ್ಮ್ದಲ್ಲಿ ಶೌಚಾಲಯಗಳ ನಿರ್ಮಾಣ ಆಗಬೇಕಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಇಲೆಕ್ಟ್ರಿಕ್ ಕಾರ್ ಸೌಲಭ್ಯ, ಸುಸಜ್ಜಿತ ಔಷಧ ಕೇಂದ್ರ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಿಲ್ದಾಣದಲ್ಲಿ ಈಗಿರುವ ಸಿಸಿ ಟಿವಿಗಳನ್ನು ಉನ್ನತೀಕರಣಗೊಳಿಸಬೇಕು. ದಿನದ 24 ಗಂಟೆಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಪ್ರತ್ಯೇಕವಾಗಿ ರೈಲ್ವೆ ವಿಚಾರಣಾ ಕೊಠಡಿ ಸ್ಥಾಪಿಸಬೇಕು. ನಿಲ್ದಾಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಬೆಳಗಾವಿ-ಪುಣೆ ಮಧ್ಯೆ ಇಂಟರ್ ಸಿಟಿ ರೈಲು ಆರಂಭಿಸಬೇಕು. ಇದು ಬಹಳ ದಿನಗಳ ಬೇಡಿಕೆಯಾಗಿದೆ. ಬೆಳಗಾವಿಯಿಂದ ಇದು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಹಾಗೂ ಪುಣೆಯಿಂದ ಸಂಜೆ 6 ಗಂಟೆಗೆ ಬಿಡುವ ಸಮಯ ನಿಗದಿಪಡಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಇದಲ್ಲದೆ ಬೆಳಗಾವಿಯಿಂದ ಪ್ರತಿದಿನ ಬೆಂಗಳೂರು ಹಾಗೂ ಮುಂಬೈಗೆ ಸಾಕಷ್ಟು ಜನ ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಬೆಳಗಾವಿಯಿಂದ
ಈ ಎರಡೂ ನಗರಗಳಿಗೆ ಪ್ರತ್ಯೇಕ ರೈಲು ಆರಂಭಿಸಬೇಕು. ಈಗ ಧಾರವಾಡದಿಂದ ಮೈಸೂರಿಗೆ ಇರುವ ರೈಲನ್ನು ಬೆಳಗಾವಿಗೆ ವಿಸ್ತರಿಸಬೇಕು. ಮೀರಜ್‌ದಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ಹೊಸ ರೈಲು ಪ್ರಾರಂಭ ಮಾಡಬೇಕು. ಬೆಳಗಾವಿಯಿಂದ ಗೋವಾಕ್ಕೆ ರೈಲು ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಶ ಬಾಗಿ, ಗೌರವ ಕಾರ್ಯದರ್ಶಿ ಸತೀಶ ಗೌರಗೊಂಡ, ಹಿರಿಯ ಉಪಾಧ್ಯಕ್ಷ ರೋಹನ್ ಜುವಳಿ ಮೊದಲಾದವರು ಉಪಸ್ಥಿತರಿದ್ದರು.