Advertisement

ಅನುದಾನ ದುರ್ಬಳಕೆ: ಭ್ರಷ್ಟಾಚಾರ ನಿಗ್ರಹ ದಳಕ್ಕೆ  ದೂರು

09:54 PM Mar 23, 2019 | Team Udayavani |

ಕಡಬ: ಕೌಕ್ರಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ ಮುಡಿಪುವಿನಲ್ಲಿ ಮಾಣಿಯಡ್ಕ ಹೊಳೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕಿರು ಸೇತುವೆಯ ಕಾಮಗಾರಿ ಆರಂಭಿಕ ಹಂತದಲ್ಲಿಯೇ ಸ್ಥಗಿತಗೊಂಡಿದ್ದು, ಬಿಡುಗಡೆಯಾಗಿರುವ ಅನುದಾನ ದುರ್ಬಳಕೆಯಾಗಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ ಎಂದು ಕಡಬದ ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌ ಅವರು ತಿಳಿಸಿದ್ದಾರೆ. ಶುಕ್ರವಾರ ಕಡಬ ಪ್ರಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕಿರು ಸೇತುವೆ ನಿರ್ಮಿಸುವುದಕ್ಕಾಗಿ ಸುಮಾರು 30 ಲಕ್ಷ ರೂ. ಅನುದಾನ ನೀಡಲಾಗಿದೆ. ಕಾಮಗಾರಿಯನ್ನು ಸರಕಾರದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಡಿಐಎಲ್‌) ಮೂಲಕ ನಡೆಸುವುದಕ್ಕಾಗಿ ಅನುದಾನದ ಶೇ. 40 ಅನ್ನು ಕೆಆರ್‌ಡಿಐಎಲ್‌ ಖಾತೆಗೆ ವರ್ಗಾಯಿಸಲಾಗಿದ್ದು, ಸೇತುವೆ ನಿರ್ಮಿಸ ಬೇಕಾಗಿರುವ ಸ್ಥಳದಲ್ಲಿ ಸುಮಾರು 9 ತಿಂಗಳ ಹಿಂದೆ ಕೇವಲ 2 ಅಡಿಪಾಯದ ಗುಂಡಿಗಳನ್ನು ತೆಗೆದಿರುವುದು ಬಿಟ್ಟರೆ ಬಳಿಕ ಕಾಮಗಾರಿ ನಡೆದಿಲ್ಲ. ಆದುದರಿಂದ ಬಿಡುಗಡೆಯಾಗಿರುವ ಅನುದಾನ ದುರ್ಬಳಕೆಯಾಗಿರುವ ಶಂಕೆ ಇರು ವುದರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಿ ಮಳೆಗಾಲಕ್ಕೆ ಮೊದಲು ಪೂರ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮ, ಪ್ರಮುಖರಾದ ಜಾನ್‌ ಅಬ್ರಹಾಂ ಇಚ್ಲಂಪಾಡಿ, ಎ.ಜೆ. ಚಾಕೋ, ಜಾನ್‌ ಜೇಕಬ್‌, ಜಾನ್‌ ಪೀಟರ್‌, ರಾಜನ್‌ ಕೆ. ಮ್ಯಾಥ್ಯೂ, ಜೆಸ್ಟಿನ್‌ ಜೋಸೆಫ್‌, ವರ್ಗೀಸ್‌ ಅಬ್ರಹಾಂ ಪತ್ರಿಕಾಗೋಷ್ಠಿಯಲ್ಲಿದ್ದರು.

ಚುನಾವಣೆ ಬಹಿಷ್ಕಾರಕ್ಕೆ ಸಿದ್ಧತೆ
ಸೇತುವೆಯ ಕಾಮಗಾರಿ ಸ್ಥಗಿತಗೊಂಡಿರುವ ಕುರಿತು ಈಗಾಗಲೇ ದ.ಕ. ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಗೆ ದೂರು ನೀಡಲಾಗಿದೆ. ಸ್ಥಳೀಯ ಜನರು ಈಗಾಗಲೇ ಸಂಬಂಧಪಟ್ಟವರಿಗೆ ದೂರು ಸಲ್ಲಿಸಿ ಸ್ಥಳೀಯವಾಗಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಿಗೂ ಮನವಿ ಮಾಡಲಾಗಿದೆ. ಕೂಡಲೇ ಕಾಮಗಾರಿ ಆರಂಭಿಸದೇ ಹೋದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಯ್ಯದ್‌ ಮೀರಾ ಸಾಹೇಬ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next