Advertisement

ಮಳೆಗಾಲದಲ್ಲಿ ದ್ವೀಪವಾಗುವ ಕಲ್ಲಂಡ- ಕಡ್ತಿಮೇರ್‌

12:17 AM Jun 30, 2020 | Sriram |

ಬೆಳ್ತಂಗಡಿ: ಬ್ರಿಟಿಷರ ಕಾಲದ ಗಾಡಿ ರಸ್ತೆಯಾಗಿದ್ದ ಮಿತ್ತಬಾಗಿಲು ಗ್ರಾಮದ ಕಲ್ಲಂಡ-ಕಡ್ತಿಮೇರ್‌ ಸಂಪರ್ಕಕ್ಕಿದ್ದ ಏಳುವರೆ ಹಳ್ಳಕ್ಕೆ ಸಂಪರ್ಕ ಸೇತುವೆ ನಿರ್ಮಾಣವಾಗದ ಕಾರಣದಿಂದ ಮಳೆಗಾಲದಲ್ಲಿ ಕಡ್ತಿಕುಮೇರ್‌ ಸುತ್ತಮುತ್ತಲಿನ ಸುಮಾರು 40 ಮನೆಗಳು ದ್ವೀಪದಂತಾಗುತ್ತವೆ.

Advertisement

ಸೇತುವೆ ಬಗ್ಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಗೆ ಈ ಹಳ್ಳ ಮತ್ತಷ್ಟು ವಿಸ್ತಾರವಾಗಿದೆ. ಪ್ರತಿ ಮಳೆಗಾಲದಲ್ಲಿ ಸ್ಥಳೀಯರೇ ತಾತ್ಕಾಲಿಕವಾಗಿ ಕಾಲು ಸಂಕ ನಿರ್ಮಿಸುತ್ತಿದ್ದರು. ಈ ವರ್ಷ ಹಳ್ಳ ವಿಸ್ತಾರವಾಗಿರುವ ಕಾರಣ ಸಾಧ್ಯವಾಗಿಲ್ಲ. ಜತೆಗೆ ಇಲ್ಲಿನ ರಸ್ತೆಯೂ ಸ್ಥಿತಿಯಲ್ಲಿದ್ದು, ಅದಕ್ಕೂ ಕಾಂಕ್ರೀಟ್‌ ಅಳವಡಿಸಬೇಕು ಎಂಬ ಆಗ್ರಹ ಸ್ಥಳೀಯರದ್ದಾಗಿದೆ.

40 ಮನೆಗಳಿಗೆ ಸಂಪರ್ಕ
ಮಿತ್ತಬಾಗಿಲು-ಮಲವಂತಿಗೆ ಗ್ರಾಮದ ಮಧ್ಯಭಾಗದಲ್ಲಿ ಏಳುವರೆ ಹಳ್ಳ ಹರಿಯುತ್ತಿದೆ. 167 ಸರ್ವೇ ನಂಬರ್‌ನಲ್ಲಿರುವ ಕಲ್ಲಂಡ ಎಂಬಲ್ಲಿ ಸೇತುವೆ ನಿರ್ಮಾಣದ ಬೇಡಿಕೆಯಿದೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಸಹಿತ ಎಲ್ಲರಿಗೂ ಹಳ್ಳದಿಂದ ತೀವ್ರ ಸಮಸ್ಯೆಯಾಗುತ್ತಿದೆ.

ಸೇತುವೆ ನಿರ್ಮಾಣವಾದಲ್ಲಿ ಮಿತ್ತಬಾಗಿಲು, ಮಲವಂತಿಗೆ ಗ್ರಾಮ ವ್ಯಾಪ್ತಿಗೆ ಬರುವಂತೆ ಕಡ್ತಿಕುಮೇರು, ಬದನಾಜೆ, ಎಲ್ಯರಕಂಡ, ಮಕ್ಕಿ ಪರ್ಲ, ಕೇದೆ, ಕೋಡಿ, ಅಮೈ, ಮೂಡಲ, ಮಲೆಜೋಡಿ, ಬಾನೊಟ್ಟು, ಕಕ್ಕೆನೇಜಿ ಸುತ್ತಮುತ್ತಲಿನವರಿಗೆ ಅನುಕೂಲವಾಗಲಿದೆ.

ರಸ್ತೆಗೂ ಬೇಡಿಕೆ
ಒಂದೆಡೆ ರಾಷ್ಟ್ರೀಯ ಉದ್ಯಾನವನ,ಮತ್ತೊಂದು ಭಾಗದಲ್ಲಿ ರಮಣೀಯ ಜಲಪಾತಗಳ ಮಧ್ಯದ 150 ಎಕ್ರೆಗೂ ಅಧಿಕ ಹಸಿರು ಹೊದ್ದ ಈ ಕೃಷಿ ಪ್ರದೇಶವು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸೂಕ್ತವಾಗಿದೆ. ಎರ್ಮಾಯಿ ಜಲಪಾತಕ್ಕೆ ಇದೇ ದಾರಿಯಾಗಿ ಹೋಗಬೇಕಿದೆ. ಆದರೆ ಈ ರಸ್ತೆಗೂ ಕಾಂಕ್ರೀಟ್‌ ಹಾಕಬೇಕು ಎಂಬ ಬೇಡಿಕೆಯೂ ಇದೆ. ಸುಮಾರು 28 ಅಡಿ ಉದ್ದದ ಕಾಂಕ್ರೀಟ್‌ ರಸ್ತೆಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.

Advertisement

ಬ್ರಿಟಿಷರ ಗಾಡಿ ರಸ್ತೆ
1952ರಲ್ಲಿ ಇಲ್ಲಿನವರಿಗೆ ಜಾಗ ಮಂಜೂರಾಗಿತ್ತು. ಹಿಂದೆ ಚಾರ್ಮಾಡಿ ರಸ್ತೆ ನಿರ್ಮಾಣಕ್ಕೂ ಮುನ್ನ ಘಟ್ಟ ಪ್ರದೇಶ ಹಾಗೂ ಬಳ್ಳಾಲರಾಯನ ದುರ್ಗದಿಂದ ಬೆಳ್ತಂಗಡಿ ಕಿಲ್ಲೂರಿನಲ್ಲಿದ್ದ ಸುಂಕದಕಟ್ಟೆ ತಲುಪಲು ರಾಜ ಮಹಾರಾಜರ ಗಾಡಿ ಸಾಗಲು ಈ ರಸ್ತೆಯನ್ನು ಬಳಸಲಾಗುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದರು.ಟಿಪ್ಪು ಸುಲ್ತಾನ್‌ ಜಮಲಾಬಾದ್‌ನಿಂದ ಬಳ್ಳಾಲ ದುರ್ಗಕ್ಕೆ ಸಾಗಲು ಇದೇ ರಸ್ತೆಯನ್ನು ಬಳಸಿದ್ದನಂತೆ. ಆದರೆ ಈವರೆಗೂ ಕಿರು ಸೇತುವೆ ನಿರ್ಮಾಣ ಸಾಧ್ಯವಾಗಿಲ್ಲ.

ಕ್ರಿಯಾಯೋಜನೆ ಸಿದ್ಧ
ಕಲ್ಲಂಡದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಗ್ರಾ.ಪಂ.ನಿಂದ 3 ಸಾ.ರೂ. ವೇತನ ನೀಡುತ್ತಿತ್ತು. ಈಗಾಗಲೆ ಏಳುವರೆ ಹಳ್ಳ ಕುಕ್ಕಾವು ಸಮೀಪದ ಸೇತುವೆಗೆ 25 ಲ.ರೂ. ಕ್ರಿಯಾಯೋಜನೆ ಸಿದ್ಧವಾಗಿದೆ. ಕಲ್ಲಂಡ ಸೇತುವೆಗೂ ಶೀಘ್ರ ಅನುದಾನ ಒದಗಿಸುವಂತೆ ಶಾಸಕರ ಬಳಿ ಮನವಿ ಮಾಡಲಾಗುವುದು.
– ಜಯಕೀರ್ತಿ,
ಪಂ. ಅಭಿವೃದ್ಧಿ ಅಧಿಕಾರಿ, ಮಿತ್ತಬಾಗಿಲು

40 ಮನೆಗಳಿಗೆ ಪ್ರಯೋಜನ
ಹಲವು ವರ್ಷಗಳಿಂದ ನಾವೇ ಕಾಲು ಸಂಕ ನಿರ್ಮಿಸಿ ಮಳೆಗಾಲದಲ್ಲಿ ದಾಟುತ್ತಿದ್ದೆವು. ಕಳೆದ ವರ್ಷ ಪ್ರವಾಹಕ್ಕೆ ಹಳ್ಳವು ನದಿ ಸ್ವರೂಪ ಪಡೆದಿದ್ದು, ಈಗ ನಮಗೆ ಕಾಲು ಸಂಕ ನಿರ್ಮಿಸಲಾಗುತ್ತಿಲ್ಲ.ಸೇತುವೆ ನಿರ್ಮಾಣ ವಾದಲ್ಲಿ 40 ಮನೆಗಳಿಗೆ ಪ್ರಯೋಜನವಾಗಲಿದೆ.
ಅಶೋಕ, ಕಡ್ತಿಕುಮೇರ್‌,
ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next