ಬೆಂಗಳೂರು: ಕರ್ನಾಟಕ ದಲ್ಲಿ ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆಯ ಸಂಭ್ರಮವು ಅಕ್ಷಯ ತೃತೀಯ ದಿನದವರೆಗೂ ಮುಂದುವರಿದಿದೆ. ಈ ಬಾರಿ ಅಕ್ಷಯ ತೃತೀಯದಲ್ಲಿ ಬಾಲರಾಮನ ಚಿನ್ನ ಹಾಗೂ ಬೆಳ್ಳಿಯ ವಿಗ್ರಹ ಮತ್ತು ನಾಣ್ಯದ ಬೇಡಿಕೆ ಹೆಚ್ಚಿತ್ತು.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಉತ್ತಮ ಫಲ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಪ್ರತಿಯೊಬ್ಬರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸುತ್ತಾರೆ. ಈ ಬಾರಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಯಲ್ಲಿ ಶೇ.18ರಷ್ಟು ಏರಿಕೆ ಕಂಡು ಬಂದಿದ್ದು, ಒಂದೇ ದಿನದಲ್ಲಿ 2,050 ಕೆಜಿ ಚಿನ್ನ ಹಾಗೂ 1,900 ಕೆಜಿ ಬೆಳ್ಳಿ ವಹಿವಾಟು ನಡೆದಿದೆ.
22 ಕೆ. 1 ಗ್ರಾಂ ಚಿನ್ನಕ್ಕೆ 6,700 ರೂ. ಹಾಗೂ ಬೆಳ್ಳಿಗೆ ಗ್ರಾಂಗೆ 82 ರೂ. ದರ ನಿಗದಿಯಾಗಿತ್ತು. ಚಿನ್ನ, ಬೆಳ್ಳಿ ಸೇರಿ 1,500 ಕೋಟಿ ರೂ.ಗಳಿಗೂ ಕೋಟಿಗೂ ಮೀರಿದ ವಹಿವಾಟು ನಡೆದಿದೆ ಎಂದು ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.
ಸಾಮಾನ್ಯವಾಗಿ ಅಕ್ಷಯ ತೃತೀಯದಂದು ಹೆಚ್ಚಿನವರು ಚಿನ್ನದ ಅಥವಾ ಬೆಳ್ಳಿಯ ನಾಣ್ಯ ಹಾಗೂ ವಿವಿಧ ವಿನ್ಯಾಸಗಳ ಆಭರಣ ಖರೀದಿಸುತ್ತಾರೆ.
ಆದರೆ ಈ ಬಾರಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಯ ಶ್ರೀ ಬಾಲ ರಾಮನ ಮೂರ್ತಿ, ನಾಣ್ಯ ಹಾಗೂ ಪೆಂಡೆಂಟ್‌ಗಳನ್ನು ಖರೀದಿಸಿದ್ದಾರೆ. 10ರಿಂದ 100 ಗ್ರಾಂ ತೂಕದ ವಿಗ್ರಹಗಳು ಮಾರಾಟ ವಾಗಿವೆ. ಇನ್ನೂ ಅಮೂಲ್ಯವಾದ ಹರಳಿನಿಂದ ಕೂಡಿದ ಬಾಲ ರಾಮನ ಮೂರ್ತಿಗೆ ಹೆಚ್ಚಿನ ಬೇಡಿಕೆ ಇತ್ತು ಎಂದು ತಿಳಿದು ಬಂದಿದೆ.
ಜನರು ಚಿನ್ನದಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎನ್ನುವುದನ್ನು ಮನಗೊಂಡಿದ್ದಾರೆ. ಈ ಬಾರಿ ಅಕ್ಷಯ ತೃತೀಯದಲ್ಲಿ ಚಿನ್ನಾಭರಣ ಖರೀದಿಸಿದವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವೆಂದರೆ ಬಾಲ ರಾಮನ ಮೂರ್ತಿ, ಪೆಂಡೆಂಟ್ ಹಾಗೂ ನಾಣ್ಯಗಳಿಗೆ ಭಾರೀ ಬೇಡಿಕೆ ಇತ್ತು.
-ಡಾ. ಬಿ.ರಾಮಾಚಾರಿ , ಆಭರಣ ವರ್ತಕರ ಒಕ್ಕೂಟ