ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾ.ಪಂ. ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಸಾಕಷ್ಟು ಮಕ್ಕಳಿದ್ದರೂ ಅವರಿಗೆ ಸರಿಯಾಗಿ ಶೈಕ್ಷಣಿಕ ಮಾರ್ಗದರ್ಶನ ನೀಡಲು ಕಾರ್ಯಕರ್ತೆ ಇಲ್ಲದಿರುವ ಪರಿಣಾಮ ಎಲ್ಲವನ್ನೂ ಸಹಾಯಕಿಯೇ ನಿರ್ವಹಿಸುವಂತಾಗಿದೆ. ಕಳೆದ 5 ವರ್ಷಗಳ ಹಿಂದೆ ನಿರ್ಮಾಣ ಗೊಂಡ ನೂತನ ಕಟ್ಟಡ ಅಂಗನವಾಡಿ ಕೇಂದ್ರದಲ್ಲಿ ಸೂಕ್ತ ಸ್ಥಳಾವಕಾಶ ಇಲ್ಲದೆ ಮಕ್ಕಳು ಮಧ್ಯಾಹ್ನ ಊಟ ಸೇವಿಸುವುದಕ್ಕೂ ಪರದಾಡುವಂತಾಗಿದೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದರೂ ಕಳೆದ ಒಂದೂವರೆ ತಿಂಗಳಿನಿಂದ ಪೂರ್ಣಕಾಲಿಕ ಕಾರ್ಯಕರ್ತೆಯೂ ಇಲ್ಲದಂತಾಗಿದೆ.
ಈ ಹಿಂದಿನ ಕಾರ್ಯಕರ್ತೆ ಕಳೆದ ಎಪ್ರಿಲ್‌ನಲ್ಲಿ ನಿವೃತ್ತಿಗೊಂಡು ಇದೀಗ ವಾರಕ್ಕೆ ಎರಡು ದಿನಗಳಂತೆ ಸಿದ್ದಕಟ್ಟೆ ಸಮೀಪದ ಹೆಣ್ಣೂರು ಪದವು ಅಂಗನವಾಡಿ ಕೇಂದ್ರದಿಂದ ಕಾರ್ಯಕರ್ತೆ ಬಂದು ಹೋಗುತ್ತಿದ್ದಾರೆ. ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಪೂರ್ಣಕಾಲಿಕ ಕಾರ್ಯಕರ್ತೆ ನೇಮಕಗೊಳಿಸು ವುದರ ಜತೆಗೆ ಮಕ್ಕಳಿಗೆ ಸಾಕಷ್ಟು ಸ್ಥಳಾವಕಾಶ ಸಹಿತ ವಿವಿಧ ಮೂಲ ಸೌಕರ್ಯ ಒದಗಿಸಿಕೊಡುವಂತೆ ಬಿ.ಸಿ. ರೋಡ್ ಮಹಿಳಾ ಮತ್ತು ಮತ್ತು
ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿಕೊಂಡರೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮಕ್ಕಳ ಹೆತ್ತವರು ಆರೋಪಿಸಿದ್ದಾರೆ.
ಈ ಬಗ್ಗೆ ಶೀಘ್ರವೇ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಗ್ರಾ.ಪಂ. ಮಾಜಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಎಚ್ಚರಿಸಿದ್ದಾರೆ.