Advertisement

ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

09:03 PM Nov 26, 2019 | Lakshmi GovindaRaj |

ಚಾಮರಾಜನಗರ: ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಬಾಡಿಗೆ ವಾಹನ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದು, ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ವಾಹನ ಟೆಂಡರ್‌ನಲ್ಲಿ ಕೆಟಿಪಿಪಿ ಕಾಯ್ದೆ ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ಉಲ್ಲಂಘಿಸಿ ಮನಬಂದಂತೆ ಷರತ್ತು ವಿಧಿಸಿ ನೂತನ ಟ್ರಾವೆಲ್ಸ್‌ ಮಾಲೀಕರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಳಿಕ ಜಿಲ್ಲಾಧಿಕಾರಿ ಕಾವೇರಿ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷಪಾತ ಧೋರಣೆ ನೀತಿ: ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಜಿಲ್ಲಾಡಳಿತ ಮತ್ತು ಜಿಪಂಗೆ ಸೇರಿದ ವಿವಿಧ ಇಲಾಖೆಗಳಲ್ಲಿ ಕಚೇರಿ ಉಪಯೋಗಕ್ಕಾಗಿ ಹೊರಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ವಾಹನಗಳನ್ನು ಪಡೆದುಕೊಳ್ಳಲು ಟೆಂಡರ್‌ ನಡೆಸಲಾಗುತ್ತದೆ. ಟೆಂಡರ್‌ ನಡೆಸುತ್ತಿರುವ ಪ್ರತಿಯೊಂದು ಇಲಾಖೆಯವರು ಕೆಟಿಪಿಪಿ ಕಾಯ್ದೆ ನಿಯಮವನ್ನು ಅನುಸರಿಸಿ ಟೆಂಡರ್‌ ಮಾಡಬೇಕು.

ಆದರೆ, ಅಧಿಕಾರಿಗಳು ಒಂದೊಂದು ಇಲಾಖೆಗಳಲ್ಲಿ ಒಂದೊಂದು ತರಹದ ತಮ್ಮದೇ ಆದ ನಿಯಮಗಳನ್ನು ಅನುಸರಿಸಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಹಳೆಯ ಟ್ರಾವೆಲ್ಸ್‌ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಅವರ ಜತೆ ಶಾಮೀಲಾಗಿ ಪಕ್ಷಪಾತ ಧೋರಣೆ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ಹಳೆ ಮಾಲೀಕರಿಗೆ ಅನುಕೂಲ: ಆಡಳಿತ ಸುಧಾರಣಾ ಇಲಾಖೆ ಇಲ್ಲಿಯವರಿಗೂ ಹೊರಡಿಸಿರುವ ಸುತ್ತೋಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ವಿಶಿಷ್ಠವಾದ ನಿರ್ಬಂಧವನ್ನು ಹೇರಿಲ್ಲ. ಆದರೂ ಇಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನೂತನ ಟ್ರಾವೆಲ್ಸ್‌ ಮಾಲೀಕರಿಗೆ ಅನಾನುಕೂಲವಾಗುವಂತೆ ಇಲ್ಲ ಸಲ್ಲದ ಷರತ್ತುಗಳನ್ನು ವಿಧಿಸಿ, ನಿರ್ಬಂಧಗಳನ್ನು ಹೇರುವ ಮೂಲಕ ಶೋಷಣೆ ಮಾಡಿ ಹಳೆಯ ಮಾಲೀಕರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ದೂರಿದರು.

Advertisement

ಸಮಗ್ರ ತನಿಖೆ ನಡೆಸಿ: ಸರ್ಕಾರದಿಂದ ಯಾವುದೇ ಹೊರ ಗುತ್ತಿಗೆ ನಡೆಸುವಾಗ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ನೀಡಬೇಕು ಎಂಬ ನಿಯಮ ಇದ್ದರೂ ಕೂಡ, ಸಾರ್ವಜನಿಕ ಪ್ರಕಟಣೆಗಳಲ್ಲಿ ಆದೇಶ ಹೊರಡಿಸಿ ಪಾಲನೆ ಮಾಡದೆ ಎಸ್‌ಸಿ, ಎಸ್‌ಟಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡು ಕಾನೂನು ಬಾಹಿರ ಟೆಂಡರ್‌ಗಳನ್ನು ನಡೆಸಿ ದೌರ್ಜನ್ಯ ಎಸಗಿದ್ದಾರೆ. ಆದ್ದರಿಂದ‌ ಜಿಲ್ಲಾಧಿಕಾರಿಯವರು, ಜಿಪಂ ಸಿಇಒ ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.

ಕೆಟಿಪಿಪಿ ಕಾಯ್ದೆ, ಎಸ್‌ಸಿ, ಎಸ್‌ಟಿ ಕಾಯ್ದೆ ನಿಯಮವನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಆಡಳಿತ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ನೂತನ ಟ್ರಾವೆಲ್ಸ್‌ ಮಾಲೀಕರನ್ನು ಶೋಷಣೆ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಸನ್ನ ನಾಯಕ, ಸ್ವಾಮಿ, ಮಹೇಶ್‌, ನಾಗೇಶ್‌, ಮಹದೇವಸ್ವಾಮಿ, ಮುತ್ತುರಾಜು, ರಾಜೇಶ್‌, ಬಸವಣ್ಣ, ರಾಜಪ್ಪ, ರಘು, ರವಿ, ರಾಜಪ್ಪ, ಮರಪ್ಪ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next