ಮೈಸೂರು: ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಆನ್‌ಲೈನ್ ಶಿಕ್ಷಣಕ್ಕೆ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ದಸಂಸ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಆನ್‌ಲೈನ್ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸದಂತೆ ಮತ್ತು ಅದಕ್ಕಾಗಿ ಒತ್ತಾಯಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಎಲ್ಲೆಡೆ ಕೋವಿಡ್ ಸೋಂಕು ಹರಡಿರುವುದರಿಂದ ದೇಶಾ ದ್ಯಂತ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆಯಾ ಗ್ರಾಮಗಳಲ್ಲಿ ಮತ್ತು ವಾರ್ಡ್‌ಗಳಲ್ಲಿ ನಿಗದಿತ ಸಂಖ್ಯೆಯಲ್ಲಿನ ವಿದ್ಯಾರ್ಥಿಗಳಿಗೆ, ವೈದ್ಯರಿಂದ ಚಿಕಿತ್ಸೆಗೊಳಪಡಿಸಬೇಕು. ಆ ಮೂಲಕ ವಿದ್ಯಾರ್ಥಿಗೆ ಸೋಂಕಿಲ್ಲ ಎಂಬುದನ್ನು ದೃಢಪಡಿಸಿಕೊಂಡು ಆ ಮಕ್ಕಳಿಗೆ ಶಿಕ್ಷಣ ನೀಡ ಬೇಕು. ಆದರೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ. ಇದು ರಾಜ್ಯ ಸರ್ಕಾರದ ತೀರ್ಮಾನವಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆನ್‌ಲೈನ್ ಶಿಕ್ಷಣದ ಬಗ್ಗೆ ತೀರ್ಮಾನಿಸಬೇಕು. ಆದರೆ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ಅವೈಜ್ಞಾನಿಕವಾಗಿದೆ ಎಂದು ಖಂಡಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಉಮಾ ಮಹದೇವ್, ಯಡದೊರೆ ಮಹ ದೇವಯ್ಯ, ಮಹದೇವ್, ಸಣ್ಣಯ್ಯ ಲಕ್ಕೂರು ಇತರರಿದ್ದರು.