Advertisement

ಮರಳು ಗುತ್ತಿಗೆ ರದ್ದತಿಗೆ ಆಗ್ರಹ

09:54 AM Jan 29, 2019 | |

ಚಿತ್ರದುರ್ಗ: ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಚಳ್ಳಕೆರೆ ತಾಲೂಕಿನ ವೇದಾವತಿ ನದಿ ದಡದ ತೊರೆಬೀರನಹಳ್ಳಿ, ಕಲಮರಹಳ್ಳಿ, ಮೈಲನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ಬಿದರಕೆರೆ, ಹೊಸಹಳ್ಳಿಗಳಲ್ಲಿ ಮರಳು ಗುತ್ತಿಗೆದಾರರು ನಿಯಮ ಉಲ್ಲಂಘಿಸಿ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಮತ್ತಿತರ ದೊಡ್ಡ ನಗರಗಳಿಗೆ ಮರಳು ಸಾಗಾಣಿಕೆ ಮಾಡಿ ಸಂಪತ್ತು ಲೂಟಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಚಿತ್ರದುರ್ಗ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ವೇದಾವತಿ ನದಿಯ ಪಕ್ಕದಲ್ಲಿ ಬರುವ ನೂರಾರು ಗ್ರಾಮಗಳ ರೈತರು ಹಾಗೂ ಜನರು ವೇದಾವತಿ ನದಿ ನೀರನ್ನೇ ನೆಚ್ಚಿಕೊಂಡಿದ್ದಾರೆ.ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ತಾಲೂಕಿನಲ್ಲಿ ಬೇರೆ ಯಾವುದೇ ನದಿ ಹರಿಯುವುದಿಲ್ಲ. ಇಂತಹ ಭೀಕರ ಪರಿಸ್ಥಿತಿಯಲ್ಲಿ ವೇದಾವತಿ ನದಿ ತಪ್ಪಲಲ್ಲಿ ಮರಳು ತೆಗೆದರೆ ನೀರು ನಿಲ್ಲುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಕೂಡಲೆ ಗುತ್ತಿಗೆ ಟೆಂಡರ್‌ ರದ್ದುಪಡಿಸಿ ವೇದಾವತಿ ನದಿಯಲ್ಲಿನ ಮರಳನ್ನು ಉಳಿಸಿ ರೈತರು ಹಾಗೂ ಜನ-ಜಾನುವಾರುಗಳ ಹಿತ ಕಾಪಾಡುವಂತೆ ಮನವಿ ಮಾಡಿದರು.

ಗುತ್ತಿಗೆದಾರರು ಟೆಂಡರ್‌ ನೆಪದಲ್ಲಿ ಪ್ರತಿನಿತ್ಯ ರಾತ್ರಿ ವೇಳೆ 50 ರಿಂದ 60 ಲಾರಿ ಲೋಡ್‌ಗಳಷ್ಟು ಮರಳನ್ನು ಬೆಂಗಳೂರಿಗೆ ಮಾರಾಟ ಮಾಡುತ್ತಿದ್ದಾರೆ. ನದಿ ಮರಳನ್ನು ರಕ್ಷಿಸಲು ಹೋದ ರೈತರ ಮೇಲೆ ಪೊಲೀಸರನ್ನು ಬಿಟ್ಟು ಹೆದರಿಸುತ್ತಿದ್ದಾರೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಮರಳು ಲೂಟಿಕೋರರನ್ನು ಮಟ್ಟ ಹಾಕಬೇಕೆಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‌ಬಾಬು, ಆರ್‌.ಎ. ದಯಾನಂದಮೂರ್ತಿ, ಟಿ. ಹಂಪಣ್ಣ, ಕೆ.ಸಿ. ಹೊರಕೇರಪ್ಪ, ಬಿ.ಒ. ಶಿವಕುಮಾರ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next