ಹೂವಿನಹಡಗಲಿ: ತಾಲೂಕಿನಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ವಸೂಲಾತಿ ಮಾಡುವ ಡೊನೇಷನ್ ಹಾವಳಿಯಿಂದ ಮಕ್ಕಳ ಪೋಷಕರು ಬೇಸತ್ತು ಹೋಗಿದ್ದು, ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ತರಗತಿ ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಉಪಾಧ್ಯಕ್ಷ ಓಂಕಾರ ಪೂಜಾರ್, ತಾಲೂಕಿನಲ್ಲಿರುವ ಖಾಸಗಿ ಶಾಲಾ-ಕಾಲೇಜುಗಳು ಪ್ರೀ ಕೆಜಿಯಿಂದ ಪದವಿ ತರಗತಿಯವರೆಗೂ ಶಿಕ್ಷಣ ಕಾನೂನುಗಳನ್ನು ಗಾಳಿಗೆ ತೂರಿ ಮನ ಬಂದಂತೆ ಡೊನೇಷನ್ ವಸೂಲಾತಿ ಮಾಡುತ್ತಿದ್ದಾರೆ.
ಇದರಿಂದಾಗಿ ಪಾಲಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು, ಸೂಕ್ತ ಕಾನುನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಶಿಕ್ಷಣಾಧಿಕಾರಿಗಳು ಡೊನೇಷನ್ ಹಾವಳಿ ತಪ್ಪಿಸಲು ನಿಯಂತ್ರಣ ಸಮಿತಿ ರಚಿಸಬೇಕು. ಪ್ರತಿ ಶಾಲೆಯಲ್ಲಿಯೂ
ಸಹ ಸರ್ಕಾರದಿಂದ ನಿಗದಿಪಡಿಸಿದ ಶುಲ್ಕವನ್ನು ಸೂಚನಾ ಫಲಕದಲ್ಲಿ ಹಾಕಬೇಕು. ಅಲ್ಲದೇ ಆರ್‌ಟಿಇನಲ್ಲಿ
ಆಯ್ಕೆಯಾದ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆದುಕೊಳ್ಳುವಂತಿಲ್ಲ. ಆದರೂ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ಇನ್ನು ರಾಜ್ಯ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆದರೂ ಬಸ್ ಪಾಸ್ ವಿತರಿಸಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಕೂಡಲೇ ಬಸ್ ಪಾಸ್ ವಿತರಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಎಸ್‌ಎಫ್‌ಐ ಅಧ್ಯಕ್ಷ ಡಿ. ಮೇಘರಾಜ, ಉಪಾಧ್ಯಕ್ಷ ಎಲ್. ಕೃಷ್ಣನಾಯ್ಕ, ಸಂತೋಷ್, ಚಂದ್ರಶೇಖರ್, ಗಿರೀಶ್, ವೀರೇಶ್, ರಾಜು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.