ಹೊಸದಿಲ್ಲಿ: ಎರಡನೇ ಅಲೆಯಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ಕೊರೊನಾ ಸೋಂಕಿನ “ಡೆಲ್ಟಾ’ ರೂಪಾಂತರಿಯು ಈಗ ಹೊಸ ಅವತಾರ ತಾಳಿ “ಡೆಲ್ಟಾ ಪ್ಲಸ್’ ಎಂಬ ಹೆಸರಿನೊಂದಿಗೆ ವಕ್ಕರಿಸಿದೆ. ಆತಂಕಕಾರಿ ವಿಚಾರವೆಂದರೆ, ಲಸಿಕೆ ಹಾಗೂ ಕೋವಿಡ್‌ನಿಂದಾಗಿ ಮನುಷ್ಯನು ಪಡೆದ ಪ್ರತಿಕಾಯದ ಶಕ್ತಿಯನ್ನೂ ನಾಶ ಮಾಡುವ ಸಾಮರ್ಥ್ಯ ಈ ರೂಪಾಂತರಿಗಿದೆ. ಹೀಗಾಗಿ ಡೆಲ್ಟಾ ಪ್ಲಸ್(ಎವೈ.1 ರೂಪಾಂತರಿ ಅಥವಾ ಬಿ.1.617.2.1) ಅನ್ನು ಕೊರೊನಾದ ಅತ್ಯಂತ ಅಪಾಯಕಾರಿ ಸ್ವರೂಪ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ಈ ರೂಪಾಂತರಿಯು ಸದ್ದು ಮಾಡಲಾರಂಭಿಸಿದೆ.
ಎಲ್ಲೆಲ್ಲಿ ಎಷ್ಟು?: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ನ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಕೇರಳದಲ್ಲಿ ಪಾಲಕ್ಕಾಡ್ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಂದ ಸಂಗ್ರಹಿಸ ಲಾದ ಮಾದರಿಗಳಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಪಾಲಕ್ಕಾಡ್‌ನಲ್ಲಿ ಇಬ್ಬರಿಗೆ, ಪತ್ತನಂತಿಟ್ಟದಲ್ಲಿ 4 ವರ್ಷದ ಮಗುವಿನಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿರುವ ಮತ್ತು ಕೊರೊನಾ ವಾಸಿಯಾಗಿದ್ದ 65 ವರ್ಷದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ.
ರೋಗ ನಿರೋಧಕ ಶಕ್ತಿಗೇ ಸಡ್ಡು: ಲಸಿಕೆಯಿಂದ ಪಡೆದಿರುವ ಹಾಗೂ ಸೋಂಕಿನಿಂದಾಗಿ ಗಳಿಸಿಕೊಂಡಿರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುವಷ್ಟು ಬಲಶಾಲಿಯಾಗಿದೆ ಡೆಲ್ಟಾ ಪ್ಲಸ್. ಈ ರೂಪಾಂತರಿಯು ಅಸಲಿ ಡೆಲ್ಟಾ ರೂಪಾಂತರಿಯ ಎಲ್ಲ ಗುಣವಿಶೇಷಗಳನ್ನೂ ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಬೀಟಾ ರೂಪಾಂತರಿಯ ಲಕ್ಷಣಗಳನ್ನೂ ಹೊಂದಿದೆ. ಇದರಿಂದಾಗಿಯೇ ಇದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿಂದೆ ಆಸ್ಟ್ರಾಜೆನೆಕಾ ಲಸಿಕೆಗಳನ್ನು ದ.ಆಫ್ರಿಕಾಗೆ ಒಯ್ದಾಗ, ಇದು ಅಲ್ಲಿರುವ ರೂಪಾಂತರಿಗೆ ಒಗ್ಗುವುದಿಲ್ಲ ಎಂದು ಹೇಳಿ ಲಸಿಕೆಗಳನ್ನು ಅಲ್ಲಿನ ಸರಕಾರ ವಾಪಸ್ ಕಳುಹಿಸಿತ್ತು.
3ನೇ ಅಲೆಗೆ ನಂಟು?: ಅದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ದೇಶದ ಖ್ಯಾತ ವೈರಾಲಜಿಸ್ಟ್ ಪ್ರೊ| ಶಾಹಿದ್ ಜಮೀಲ್. ಆದರೆ 2ನೇ ಅಲೆಯಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಿಸಿದ ವೇಗ ನೋಡಿದರೆ, 3ನೇ ಅಲೆಯಲ್ಲಿ ಡೆಲ್ಟಾ ಪ್ಲಸ್ ಕೂಡ ವ್ಯಾಪಿಸುವ ಸಾಧ್ಯತೆಯನ್ನು ತಳ್ಳಿಹಾಕು ವಂತಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.