ಭಾಲ್ಕಿ: ಉತ್ತರ ಕರ್ನಾಟದ ನೆರೆಸಂತ್ರಸ್ತರಿಗೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪ್ಟದ್ದೇವರು ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಎಡದ ಕೈಯಲ್ಲಿ ಲಿಂಗಪೂಜೆ, ಬಲದ ಕೈಯಲ್ಲಿ ಜಂಗಮ ದಾಸೋಹ
ಮಾಡುವುದು ಲಿಂಗಾಯತ ಧರ್ಮದ ಪ್ರಮುಖ ಸಿದ್ಧಾಂತವಾಗಿದೆ. ಸಮಾಜದಲ್ಲಿ ಕಷ್ಟಪಡುವ ಜನರನ್ನು ಬಡವರನ್ನು ನೋಡಿ ಕಣ್ಣೀರು ಒರೆಸುವುದು ಮಾನವೀಯ ಕಾರ್ಯವಾಗಿದೆ. ಹೀಗೆ ಬಸವಾದಿ ಶರಣರ ಆಸೆಯದಂತೆ ಭಾಲ್ಕಿ ಹಿರೇಮಠವು ಸದಾ ಮಾನವೀಯ ಕಾರ್ಯಗಳನ್ನು ಮಾಡುತ್ತ ಬಂದಿದೆ.
ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ನೆರೆ ಸಂತ್ರಸ್ತ ಸಾವಿರಾರು ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣವೆಂದು ನಮ್ಮ ಹಿರೇಮಠ ಸಂಸ್ಥಾನ ವಿದ್ಯಾಪೀಠದ ವತಿಯಿಂದ 2.7 ಲಕ್ಷ ರೂ. ಮೌಲ್ಯಗದ ಸಾಮಗ್ರಿಗಳನ್ನು ಖರೀದಿಸಿ ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಶ್ರೀಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸುರಪಾಲಿ ಗ್ರಾಮಕ್ಕೆ ಭೇಟಿ ನೀಡಿ ಒಂದು ಸಾವಿರ ಮಹಿಳೆಯರಿಗೆ ಸೀರೆ, ಕುಪ್ಪಸಗಳು ಮತ್ತು ಒಂದು ಸಾವಿರ ಜನ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಕಂಪಾಸ್, ನೋಟ್ ಬುಕ್ ವಿತರಿಸಿದರು. ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮಿಗಳು, ಬಸವಕಲ್ಯಾಣ ಅನುಭವಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮಿಗಳು, ಶ್ರೀ ಬಸವಲಿಂಗ ಸ್ವಾಮಿಗಳು ಇದ್ದರು.