ತಿ.ನರಸೀಪುರ: ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಇಲಾಖಾಗಳ ಅಧಿಕಾರಿಗಳು ಸವಲತ್ತುಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸೋಸಲೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಿಂಗರಾಜು ತಿಳಿಸಿದರು.
ತಾಲೂಕಿನ ಸೋಸಲೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ನಡೆದ ಇಲಾಖಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆಯ ಅಭಿವೃದ್ಧಿಗಾಗಿ ಹಲವಾರು ಯೋಜನೆ ರೂಪಿಸಿದ್ದು, ಇದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಅಧಿಕಾರಿ ವರ್ಗದ ಮೇಲಿದೆ. ಹೀಗಾಗಿ ಅಧಿಕಾರಿಗಳು ಪ್ರತಿ ಮನೆ ಮನೆಗಳಿಗೆ ತೆರಳಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು.
ಅಂಗನವಾಡಿಯಲ್ಲಿ ನೀರಿನ ಸಮಸ್ಯೆ: ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಮಾತನಾಡಿ, ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಮಕ್ಕಳಿಗೆ ಊಟದ ವ್ಯವಸೆಯಲ್ಲಿ ತೊಂದರೆ ಉಂಟಾಗಿದೆ. ಕೂಡಲೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಮಾತೃಶ್ರೀ ಯೋಜನೆ: ಮಾತೃಶ್ರೀ ಯೋಜನೆಯಡಿ ಗರ್ಭಿಣಿಯರಿಗೆ ಗರ್ಭ ಧರಿಸಿದ 7 ನೇ ತಿಂಗಳಿಗೆ 2 ಸಾವಿರ ರೂ., 9 ತಿಂಗಳಿಗೆ 3 ಸಾವಿರ ರೂ. ಹಾಗೂ ಹೆರಿಗೆ ನಂತರ 3 ಸಾವಿರ ರೂ. ನೀಡಲಾಗುತ್ತಿದೆ. ಅನೇಕ ಮಂದಿ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ವಿವಿಧ ಯೋಜನೆಯಡಿ 96 ಮಂದಿ ಸವಲತ್ತು ಪಡೆದಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನಭವಿಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು 50 ಸಾವಿರ ರೂ.ನಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಧ್ಯವರ್ತಿಗಳ ಹಾವಳಿ: ಕೃಷಿ ಇಲಾಖೆ ಅಧಿಕಾರಿ ಸುಧಾ, ಇಲಾಖೆಯ ಮಾಹಿತಿ ನೀಡುವ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಮು, ಕೃಷಿ ಸವಲತ್ತು ಪಡೆಯಲು ಮಧ್ಯವರ್ತಿ ಸಂಪರ್ಕಿಸಬೇಕಾಗಿದೆ. ನೇರವಾಗಿ ಇಲಾಖೆಯ ಪರಿಕರಗಳು ಫಲಾನುಭಗಳಿಗೆ ತಲುಪುತ್ತಿಲ್ಲ. ಮಧ್ಯವರ್ತಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕಿಯಿಸಿದ ಕೃಷಿ ಅಧಿಕಾರಿ ಸುಧಾ, ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಒಂದು ವೇಳೆ ಇದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.
ರಿಯಾಯಿತಿ: ಇಲಾಖಾ ವತಿಯಿಂದ ಶೇ.75 ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂು ಶೇ.50 ರ ರಿಯಾಯಿತಿಯಲ್ಲಿ ಸಸಿ ಸಂರಕ್ಷಣಾ ಔಷಧ ನೀಡಲಾಗುತ್ತಿದೆ. ಆದ್ಯತೆ ಮೇರೆಗೆ ಟಾರ್ಪಲ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಆರೋಗ್ಯ, ಗ್ರಂಥಾಲಯ, ಎಪಿಎಂಸಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುವರ್ಣ ನಿಂಗಯ್ಯ, ಕಾರ್ಯದರ್ಶಿ ಗೀತಾ, ಲೆಕ್ಕಾಧಿಕಾರಿ ಶಿಲ್ಪಾ, ಗ್ರಾಮ ಲೆಕ್ಕಾಧಿಕಾರಿ ನೂರುಲ್ಲ ಷರೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.