ಹುಬ್ಬಳ್ಳಿ: ರೈತರಿಗೆ ಸರಕಾರ ನೀಡುತ್ತಿರುವ ಪರಿಹಾರ ಧನವನ್ನು ದೊರಕಿಸಿಕೊಡುವಲ್ಲಿ ಗ್ರಾಮಲೆಕ್ಕಾಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕೆಂದು ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.
ಗೋವಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು ನೀಡುವ ಕುರಿತಾಗಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೋವಿನ ಜೋಳ ಬೆಳೆದು ನಷ್ಟ ಹೊಂದಿದ ರೈತರಿಗೆ ಸರ್ಕಾರ 5 ಸಾವಿರ ಸಹಾಯಧನ ನೀಡುತ್ತಿದೆ. ಹೂ, ತರಕಾರಿ ಬೆಳೆದ ರೈತರು, ವಿವಿಧ ಕೆಲಸ ನಿರ್ವಹಿಸುವ ಕುಶಲಕರ್ಮಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಪರಿಹಾರ ಧನ ದೊರಕಿಸಿಕೊಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡುಕಿಕೊಂಡು ರೈತರು ಹುಬ್ಬಳ್ಳಿಗೆ ಬರುವಂತಾಗಬಾರದು. ನಿತ್ಯ ಬೆಳಗ್ಗೆ 10 ಮಧ್ಯಾಹ್ನ 3ರ ವರೆಗೆ ಗ್ರಾಮಗಳಲ್ಲಿ ಇದ್ದು ಕೆಲಸ ನಿರ್ವಹಿಸಬೇಕು. ಈಗಾಗಲೇ ಬೆಳೆ ಸಮೀಕ್ಷೆಯಲ್ಲಿ ನಮೂದಾದ ರೈತರಿಗೆ ದೃಢೀಕರಣ ಪತ್ರಗಳನ್ನು ನೀಡಬೇಕು. ಹೊಸದಾಗಿ ಅರ್ಜಿ ಸಲ್ಲಿಸಿದವರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಜಂಟಿ ಸಮೀಕ್ಷೆ ನಡೆಸಿ ದೃಢೀಕರಣ ಪತ್ರ ನೀಡಬೇಕು. ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 774 ಹೆಕ್ಟೇರ್ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 5611 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 4242 ಜನರು ಮುಸುಕಿನ ಜೋಳ ಬೆಳೆದಿದ್ದಾರೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ್ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ಇರದೆ ಹೊಸದಾಗಿ ಮುಸುಕಿನ ಜೋಳ ಬೆಳೆದ ರೈತರು ಅಗತ್ಯ ದಾಖಲಾತಿಗಳೊಂದಿಗೆ ಜೂ. 10ರೊಳಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸಮೀಕ್ಷೆ ನಡೆಸಿ ಅರ್ಜಿ ಪುರಸ್ಕರಿಸುವರು. ಜಂಟಿ ಖಾತೆ ಹೊಂದಿರುವವರು ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆದು ನೋಟರಿ ಅವರಿಂದ ದೃಢೀಕರಣ ಮಾಡಿಸಬೇಕು. ಪಹಣಿಯಲ್ಲಿರುವ ಹೆಸರಿನ ಬೆಳಗಾರರ ಖಾತೆಗೆ ಪರಿಹಾರ ಧನ ಜಮೆ ಮಾಡಲಾಗುವುದು. ಪಹಣಿಯಲ್ಲಿ ನೋಂದಣಿಯಾಗಿರುವ ವ್ಯಕ್ತಿ ಮೃತರಾದರೆ ಕುಟುಂಬಸ್ಥರು ಗ್ರಾಮಲೆಕ್ಕಿಗರಿಂದ ಮರಣ ದೃಢೀಕರಣ ಹಾಗೂ ಕುಟುಂಬ ಜೀವಂತ ಸದಸ್ಯರ ಪ್ರಮಾಣಪತ್ರ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು. ಪಹಣಿಯಲ್ಲಿ ಮಹಿಳೆಯ ಹೆಸರು ನಮೂದಾಗಿದ್ದಾರೆ ಅವರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ವಿವರಿಸಿದರು.
ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.