ರಬಕವಿ – ಬನಹಟ್ಟಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು 77 ವರ್ಷಗಳೇ ಕಳೆದರೂ ಅಂದಿನ ನೆನಪು ಮಾತ್ರ ಅಚ್ಚಳಿಯದೇ ಎಲ್ಲರ ಮನಸ್ಸಿನಲ್ಲೂ ಉಳಿಯಲು ಮರೆಯದೇ ಪ್ರತಿ ವರ್ಷ ನೆನಪು ಮಾಡುತ್ತಾ ಅಗಸ್ಟ್ 15 ರಂದು ಧ್ವಜಾರೋಹಣ ಮಾಡುತ್ತಾ ಬಂದಿದ್ದೇವೆ. ಅಂತೆಯೇ ಅಂದಿನ ಶುಭ ಸಂದರ್ಭದಲ್ಲಿ ಭಾಗವಹಿಸಿದವರ ನೆನಪು ಮಾತ್ರ ಅಜರಾಮರ.
ರಬಕವಿಯ ಪಿ. ಎಸ್. ಹೂಗಾರ ಅವರು ಅಂದು ಸ್ವಾತಂತ್ರ್ಯ ಸಿಕ್ಕ ಮೊದಲನೇ ಧ್ವಜಾರೋಹಣ ಸಂದರ್ಭದಲ್ಲಿ ಭಾವಚಿತ್ರ ತೆಗೆಯುವುದರ ಮೂಲಕ ಆ ನೆನಪು ಇಲ್ಲಿಯವರೆಗೂ ಉಳಿಯುವಂತೆ ಮಾಡಿದ್ದಾರೆ. ಅವರು ಇಂದು ನಮ್ಮನ್ನು ಅಗಲಿದರು. ಅವರು ಅಂದು ತೆಗೆದ ಭಾವಚಿತ್ರ ಮಾತ್ರ ಇನ್ನೂ ಅವರನ್ನು ನೆನೆಪಿಸುವಂತಿದೆ.
ಅಂದು ಸ್ವಾತಂತ್ರ್ಯ ದೊರೆತ ಸಂತಸದ ದಿನ. ಆಗ ಚೋಟಾ ಮುಂಬೈ ಎಂದೇ ಹೆಸರು ಮಾಡಿದ್ದ ನಗರ ರಬಕವಿ. ಸ್ವಾತಂತ್ರ್ಯ ದೊರೆತ ಮೊದಲ ದಿನವೇ ಅ. 14, 1947 ರಂದು ನಗರದ ಶಂಕರಲಿಂಗ ದೇವಸ್ಥಾನದ ಎದುರಿನ ಆವರಣದಲ್ಲಿ ಆಗಿನ ನಗರದ ಗಣ್ಯ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿ ಅದ್ದೂರಿಯಾಗಿ ಮೊದಲ ಧ್ವಜವಂದನೆ ಮಾಡಿ ಸಂಭ್ರಮಿಸಿದರು.
ಅಂದು ನಗರವನ್ನು ಹೂ ತೋರಣಗಳಿಂದ ಸಿಂಗರಿಸಿ, ಎಲ್ಲ ಶಾಲಾ ವಿದ್ಯಾರ್ಥಿಗಳು ನಾಗರಿಕರು ಗಾಂಧಿ ಟೋಪಿ ಧರಿಸಿ ಸ್ವಾತಂತ್ರ ದಿನಾಚರಣೆ ಆಚರಿಸಿದ್ದರು. ದೇಶವೆಲ್ಲ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿತ್ತು. ಅನೇಕ ಹಿರಿಯರು, ಮಹಿಳೆಯರು ಸೇರಿ ಸ್ವಾತಂತ್ರ ದಿನವನ್ನು ಸಂಭ್ರಮದಿಂದ ಆಚರಿಸಿ ಕುಪ್ಪಳಿಸಿದ್ದರು. ಆಗ ಇದ್ದ ಒಬ್ಬರೇ ಛಾಯಾಗ್ರಾಹಕರಾದ ರಬಕವಿಯ ದಿ.ಪಿ.ಎಸ್. ಹೂಗಾರರು ತಮ್ಮ ಕ್ಯಾಮರಾದಲ್ಲಿ ಆ ದೃಶ್ಯ ಸೆರೆ ಹಿಡಿದಿದ್ದು, ಅದು ಇಂದಿಗೂ ನಗರದ ಜನರಿಗೆ ಸವಿ-ಸವಿ ನೆನಪುಗಳನ್ನು ತಂದು ಕೊಡುವಂತಾಗಿದೆ. ಆ ಚಿತ್ರಗಳು ಅವರ ಮಗ ಇನ್ನೂ ಕಾಯ್ದಿರಿಸಿದ್ದಾರೆ.
ಫೋಟೋ: ಪಿ. ಎಸ್. ಹೂಗಾರ
– ಕಿರಣ ಶ್ರೀಶೈಲ ಆಳಗಿ