ನವದೆಹಲಿ: ಕಳೆದ ಕೆಲ ದಿನಗಳಿಂದ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು ದೆಹಲಿಯ ಭಾಗದಲ್ಲೂ ಸಾಕಷ್ಟು ಮಳೆಯಾಗಿದ್ದು ಇಲ್ಲಿನ ಪ್ರಮುಖ ನದಿಯಾದ ಯಮುನಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಅಂಚಿನಲ್ಲಿದ್ದು ನದಿ ಪಾತ್ರದ ಜನರು ಪ್ರವಾಹದ ಭೀತಿಯನ್ನು ಎದುರಿಸುತ್ತಿದ್ದಾರೆ.
ಭಾರಿ ಮಳೆಯ ಕಾರಣ ಯಮುನಾ ನದಿ ಪಾತ್ರದ ಕೆಲ ನಿವಾಸಿಗಳನ್ನು ಈ ಮೊದಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದು ಇದೀಗ ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ತುರ್ತು ಸಭೆ ಕರೆದಿದ್ದಾರೆ.
ಮಾನ್ಸೂನ್ ಬಿರುಸಿನಿಂದ ಉಂಟಾಗುವ ಪ್ರತಿಯೊಂದು ಪರಿಸ್ಥಿತಿಯನ್ನು ನಿಭಾಯಿಸಲು ದೆಹಲಿ ಸರ್ಕಾರ ಸಿದ್ಧವಾಗಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗೆ ದೆಹಲಿ ಪೊಲೀಸರು ನಿರ್ಬಂಧ ಹೇರಿದ್ದಾರೆ.
ಬೆಳಗ್ಗೆ 11 ಗಂಟೆಗೆ ಹಳೆ ರೈಲ್ವೆ ಸೇತುವೆಯಲ್ಲಿ ನೀರಿನ ಮಟ್ಟ 207.38ಕ್ಕೆ ತಲುಪಿತ್ತು. ಇದು 2013 ರ ನೀರಿನ ಮಟ್ಟಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸಧ್ಯದ ಪರಿಸ್ಥಿತಿ ಕಂಡಾಗ 1978ರಲ್ಲಿ ಯಮುನಾ ನದಿಯಲ್ಲಿ ಅತಿ ಹೆಚ್ಚು 207.49 ಮೀಟರ್ ನೀರಿನ ಮಟ್ಟ ಏರಿಕೆಯಾಗಿತ್ತು ಆದರೆ ಇಂದಿನ ಯಮುನಾ ನದಿಯ ನೀರಿನ ಹರಿವು ನೋಡಿದರೆ 1978ರ ದಾಖಲೆಯನ್ನು ಮುರಿಯುವ ಹಂತದಲ್ಲಿದೆ ಎಂದು ಹೇಳಲಾಗಿದೆ.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿಟ್ಟಿನಲ್ಲಿ ನದಿ ತೀರದಲ್ಲಿ ಜಾಗೃತಿ ಮೂಡಿಸಲು ಮತ್ತು ರಕ್ಷಣಾ ಕಾರ್ಯಕ್ಕೆ ದೋಣಿಗಳನ್ನು ನಿಯೋಜಿಸಲಾಗಿದೆ.
ದೆಹಲಿಯ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಜೊತೆಗೆ ಹರಿಯಾಣದ ಅಣೆಕಟ್ಟುಗಳಿಂದ ತುಂಬಿ ಹರಿಯುತ್ತಿರುವ ನೀರು ಯಮುನಾ ನದಿಯನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಈ ಗ್ರಾಮಕ್ಕೆ ರಸ್ತೆಯೇ ಇಲ್ಲ; ರೋಗಿಯನ್ನ ಜೋಳಿಗೆಯಲ್ಲಿ ಹೊತ್ತು ತಂದ ಕುಟುಂಬಸ್ಥರು!