ನವದೆಹಲಿ: ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ 33 ವರ್ಷದ ಮಹಿಳೆಯೊಬ್ಬಳು 14ನೇ ಬಾರಿಯೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರಿಂದ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗ್ನೇಯ ದೆಹಲಿಯ ಜೈತ್ ಪುರ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗೊಟಬಯ ರಾಜೀನಾಮೆ ಅಂಗೀಕಾರ: ಏಳು ದಿನದಲ್ಲಿ ಲಂಕಾದ ನೂತನ ಅಧ್ಯಕ್ಷರ ಆಯ್ಕೆ: ಸ್ಪೀಕರ್
ಮನೆಯಲ್ಲಿ ಸೂಸೈಡ್ ನೋಟ್ ಸಿಕ್ಕಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದ ನಂತರ ವ್ಯಕ್ತಿಯೊಬ್ಬನ ಜತೆ ದೈಹಿಕ ಸಂಪರ್ಕ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ. 13 ಬಾರಿ ಗರ್ಭಪಾತ ಮಾಡಿಸಿದ್ದು, 14ನೇ ಬಾರಿಯೂ ಗರ್ಭಪಾತಕ್ಕೆ ಒತ್ತಾಯಿಸಿದ್ದ. ಅಲ್ಲದೇ ವಿವಾಹವಾಗಲು ನಿರಾಕರಿಸಿದ್ದ. ತನಗೆ ಆತ್ಮಹತ್ಯೆ ಬಿಟ್ಟು ಬೇರೆ ಯಾವುದೇ ಮಾರ್ಗ ಉಳಿದಿಲ್ಲವಾಗಿತ್ತು ಎಂದು ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಅತ್ಯಾಚಾರ ಆರೋಪದಡಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ. ಜುಲೈ 5ರಂದು ಜೈತ್ ಪುರ್ ಪ್ರದೇಶದಿಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರವಾಣಿ ಕರೆ ಬಂದಿತ್ತು.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಕೂಡಲೇ ಆಕೆಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಆಕೆ ಬಳಸುತ್ತಿದ್ದ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.