Advertisement

ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯ: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ

07:06 PM Nov 08, 2020 | Mithun PG |

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯ ಪೈನಲ್ ಪ್ರವೇಶಿಸಲು ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇಂದು 2ನೇ ಕ್ವಾಲಿಫೈಯರ್ ನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಶ್ರೇಯಸ್  ಪಡೆ ಬ್ಯಾಟಿಂಗ್  ಆಯ್ದುಕೊಂಡಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸಲ ಫೈನಲ್‌ಗೆ ಲಗ್ಗೆ ಹಾಕಿ ಇತಿಹಾಸ ನಿರ್ಮಿಸೀತೇ ಅಥವಾ ಸನ್‌ರೈಸರ್ ಹೈದರಾಬಾದ್‌ 3ನೇ ಸಲ ಪ್ರಶಸ್ತಿ ಸುತ್ತಿಗೆ ಮುನ್ನುಗ್ಗೀತೇ ಎಂಬುದು ದ್ವಿತೀಯ ಕ್ವಾಲಿಫೈಯರ್‌ ನಲ್ಲಿ ಇತ್ಯರ್ಥವಾಗಲಿದೆ. ಪ್ಲೇ ಆಫ್ ಫ‌ಲಿತಾಂಶವನ್ನೆಲ್ಲ ಗಮನಿಸಿದಾಗ ಡೆಲ್ಲಿಗಿಂತ ಹೈದರಾಬಾದ್‌ ತಂಡವೇ ಸಾಕಷ್ಟು ಮುಂದಿರುವುದರಲ್ಲಿ ಅನುಮಾನವಿಲ್ಲ.

ಈವರೆಗೆ ಒಮ್ಮೆಯೂ ಕಪ್‌ ಎತ್ತದ, ಫೈನಲ್‌ ಮುಖವನ್ನೇ ನೋಡದ ಡೆಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ವಿರುದ್ಧ ಆಡಿದ ರೀತಿ ತೀರಾ ಬೇಸರ ಹುಟ್ಟಿಸುವಂತಿತ್ತು. ಶಾ, ಧವನ್‌, ರಹಾನೆ, ಅಯ್ಯರ್‌, ಪಂತ್‌… ಹೀಗೆ ಭಾರತದ ಟೆಸ್ಟ್‌ ತಂಡದಂತಿರುವ ಡೆಲ್ಲಿ ಶೂನ್ಯಕ್ಕೆ 3 ವಿಕೆಟ್‌ ಕಳೆದುಕೊಂಡಾಗಲೇ ಶರಣಾಗತಿ ಸಾರಿತ್ತು. ಮುಂಬೈ ಅಷ್ಟೊಂದು ಘಾತಕವಾಗಿ ಅಯ್ಯರ್‌ ಪಡೆಯ ಮೇಲೆರಗಿ ಹೋಗಿತ್ತು.

ಲೀಗ್‌ ಹಂತದ ಮೊದಲ 9 ಪಂದ್ಯಗಳಲ್ಲಿ ಏಳನ್ನು ಗೆದ್ದ ಡೆಲ್ಲಿಯ ಆಟ ಕಂಡಾಗ ಅದು ಫೇವರಿಟ್‌ ಆಗಿಯೇ ಗೋಚರಿಸಿತ್ತು. ಆದರೆ ಮುಂದಿನ 6 ಪಂದ್ಯಗಳಲ್ಲಿ ಐದನ್ನು ಸೋತು ಕಂಗಾಲಾಯಿತು. ಆದರೂ ದ್ವಿತೀಯ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತು. ಆರಂಭವೇ ಡೆಲ್ಲಿ ಪಾಲಿಗೆ ದೊಡ್ಡ ಕಂಟಕವಾಗಿ ಕಾಡಿದೆ. ಪೃಥ್ವಿ ಶಾಗೆ ಬ್ಯಾಟಿಂಗೇ ಮರೆತು ಹೋಗಿದೆ. ಧವನ್‌ ಅವಳಿ ಶತಕ ಸಿಡಿಸಿದರೂ ಸೊನ್ನೆಯ ನಂಟು ಬಿಟ್ಟಿಲ್ಲ. ಆರಂಭಿಕರಿಬ್ಬರು ಸೇರಿ 7 ಸೊನ್ನೆ ಸುತ್ತಿರುವುದು ಎಂಥ ತಂಡವನ್ನಾದರೂ ಅದುರುವಂತೆ ಮಾಡುತ್ತದೆ. ಜತೆಗೆ ರಹಾನೆ ಕೂಡ 2 ಸೊನ್ನೆ ಗೀಚಿದ್ದಾರೆ!

ಡೆಲ್ಲಿಯ ಬೌಲಿಂಗ್‌ ರಬಾಡ ಮತ್ತು ನೋರ್ಜೆ ಅವರನ್ನು ಅವಲಂಬಿಸಿದೆ. ಆದರೆ ಮೊನ್ನೆ ಮುಂಬೈ ಇವರಿಬ್ಬರನ್ನೇ ಟಾರ್ಗೆಟ್‌ ಮಾಡಿದ್ದನ್ನು ಮರೆಯುವಂತಿಲ್ಲ. ಅಶ್ವಿ‌ನ್‌, ಅಕ್ಷರ್‌ ಸ್ಪಿನ್‌ ಮ್ಯಾಜಿಕ್‌ ನಡೆದರೆ ಲಾಭವಿದೆ. ಸ್ಯಾಮ್ಸ್‌ ಬದಲು ಹೆಟ್‌ಮೈರ್‌ ಮರಳಬಹುದು. ಆಗ ಸ್ಟೋಯಿನಿಸ್‌ ಪೂರ್ತಿ ಬೌಲಿಂಗ್‌ ಕೋಟಾವನ್ನು ನಿಭಾಯಿಸಬೇಕಾಗುತ್ತದೆ.

Advertisement

ಹೈದರಾಬಾದ್‌ ಜಯದ ಓಟ

ಇನ್ನೊಂದೆಡೆ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್‌ ಸಂಘಟಿತ ಹಾಗೂ ಯೋಜನಾಬದ್ಧ ಆಟದ ಮೂಲಕ ಆರ್‌ಸಿಬಿ ಯನ್ನು ಕೆಡವಿದೆ. ತಂಡದ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಅಮೋಘ ಮಟ್ಟದಲ್ಲಿದೆ. ಕೂಟದ ಮೊದಲಾರ್ಧದಲ್ಲಿ ಹೈದರಾಬಾದ್‌ ಆಟ ಕಂಡಾಗ ಅದು ಲೀಗ್‌ ಹಂತದಲ್ಲೇ ಉದುರಿ ಹೋಗಲಿದೆ ಎನಿಸಿತ್ತು. ಆದರೆ ವಾರ್ನರ್‌ ಟೀಮ್‌ ಸರಿಯಾದ ಹೊತ್ತಿನಲ್ಲಿ ಗೆಲುವಿನ ಮೆಟ್ಟಿಲು ಏರತೊಡಗಿದೆ.

ಸನ್‌ರೈಸರ್ ಪ್ಲಸ್‌ ಪಾಯಿಂಟ್‌

ಮೊದಲ 11 ಪಂದ್ಯಗಳಲ್ಲಿ ಹೈದರಾಬಾದ್‌ಗೆ ಒಲಿದದ್ದು ನಾಲ್ಕೇ ಜಯ. ಆದರೆ ಇಲ್ಲಿಂದ ಮುಂದೆ ಎಸ್‌ಆರ್‌ಎಚ್‌ ಮುಟ್ಟಿದ್ದೆಲ್ಲ ಗೆಲುವಾಗಿ ಪರಿವರ್ತನೆ ಆಗುತ್ತಲೇ ಬಂದಿದೆ. 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೇ ಕೂಟದ ಮೊದಲ ವಿಜಯೋತ್ಸವ ಆಚರಿಸಿದ್ದ ವಾರ್ನರ್‌ ಪಡೆ, 12ನೇ ಪಂದ್ಯದಲ್ಲಿ ಮತ್ತೆ ಡೆಲ್ಲಿಯನ್ನು ಮಣಿಸಿ ಅಜೇಯ ಓಟ ಬೆಳೆಸಿದೆ. ಅರ್ಥಾತ್‌, ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಅದು ಡೆಲ್ಲಿಯನ್ನು ಮಗುಚಿದೆ. ಇದು ಕೂಡ ಹೈದರಾಬಾದ್‌ಗೆ ಪ್ಲಸ್‌ ಪಾಯಿಂಟ್‌.

ವಾರ್ನರ್‌, ವಿಲಿಯಮ್ಸನ್‌, ಪಾಂಡೆ, ಆಲ್‌ರೌಂಡರ್‌ ಹೋಲ್ಡರ್‌, ಸಂದೀಪ್‌ ಶರ್ಮ, ರಶೀದ್‌ ಖಾನ್‌, ಟಿ. ನಟರಾಜನ್‌ ಅವರೆಲ್ಲ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಗರ್ಗ್‌, ಸಮದ್‌ ಮೇಲೂ ನಂಬಿಕೆ ಇಡಬಹುದು. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಗಾಯಾಳು ಸಾಹಾ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದಷ್ಟೇ ಬ್ಯಾಡ್‌ ನ್ಯೂಸ್.

ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಆಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಕಗಿಸೊ ರಬಾಡಾ, ಅನ್ರಿಕ್ ನೋರ್ತ್ ಜೆ

ಸನ್‌ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶ್ರೀವತ್ಸ್ ಗೋಸ್ವಾಮಿ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್

Advertisement

Udayavani is now on Telegram. Click here to join our channel and stay updated with the latest news.

Next