ಘಾಜಿಯಾಬಾದ್/ ಹೊಸದಿಲ್ಲಿ: ಕಳೆದ ಎರಡು ತಿಂಗಳಿನಿಂದ ರೈತರು ಆಂದೋಲನ ನಡೆಸುತ್ತಿರುವ ಸಿಂಘು ಮತ್ತು ಗಾಜಿಪುರದಲ್ಲಿ ಪೊಲೀಸರು ಹೆಚ್ಚು ನಿಯೋಜನೆಗೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಗಾಜಿಪುರ ಮತ್ತು ಸಿಂಘು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಿಲ್ಲಿ ಮತ್ತು ಉತ್ತರ ಪ್ರದೇಶ ಪೊಲೀಸರನ್ನು ನಿಯೋಜಿಸಲಾಗಿದ್ದು, ಗಡಿಯಿಂದ ಪ್ರತಿಭಟನನಿರತರನ್ನು ಚದುರಿಸಲಾಗುತ್ತದೆ.
ಈಗಾಗಲೇ ಹರಿಯಾಣದ ಮೂರು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇವೆಲ್ಲದರ ನಡುವೆ ಘಾಜಿಯಾಬಾದ್ ಆಡಳಿತದ ವಿರುದ್ಧ ರೈತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ವರದಿಯಾಗಿದೆ.
ಘಾಜಿಯಾಬಾದ್‌ನಲ್ಲಿ ವಿದ್ಯುತ್ ಮತ್ತು ನೀರು ಸರಬರಾಜು ಕಡಿತಗೊಳಿಸಲಾಗಿದೆ. ರಸ್ತೆ ತೆರವುಗೊಳಿಸುವಂತೆ ಪೊಲೀಸರು ರೈತರಿಗೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ಇಂದು ತಡರಾತ್ರಿಯವರೆಗೆ ದಿಲ್ಲಿ ಮತ್ತು ಯುಪಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ದೀಪ್ ಸಿಧು ತಲೆಮರೆಸಿಕೊಂಡಿದ್ದಾನೆ.
Related Articles
ದಿಲ್ಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಅನಂತರ ಪೊಲೀಸರು ಈ ಮಟ್ಟಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಗಲಭೆ ಹಿನ್ನೆಲೆಯಲ್ಲಿ ರೈತ ಮುಖಂಡರಿಗೆ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಕೆಲವರ ಮೇಲೆ ಎಫ್ ಐ ಆರ್ ದಾಖಲಿಸಿ, ಕ್ರೈಂ ಬ್ರಾಂಚ್‌ಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಕೆಂಪು ಕೋಟೆಯಲ್ಲಿ ಹಿಂಸಾಚಾರ ನಡೆಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.
ಟ್ರಾಕ್ಟರ್ ಪರೇಡ್ ದಿನ ಘಾಜಿಯಾಬಾದ್‌ನಲ್ಲಿ ಸುಮಾರು 25 ಸಾವಿರ ರೈತರು ಇದ್ದರೆ ಈಗ ಸಂಖ್ಯೆ ಕೇವಲ 5 ಸಾವಿರಕ್ಕೆ ಹತ್ತಿರದಲ್ಲಿದೆ. ಸಿಂಘು ಮೇಲೆ 80 ಸಾವಿರ ರೈತರಿದ್ದರೆ, ಇಂದು ಈ ಸಂಖ್ಯೆ 25ರಿಂದ 30 ಸಾವಿರಕ್ಕೆ ಇಳಿದಿದೆ. ರೈತರು ತಮ್ಮ ಬಿಡಾರಗಳನ್ನು ಗಾಜಿಪುರ ಗಡಿಯಿಂದ ತೆರವು ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ರಸ್ತೆಗಳು ಈಗ ನಿರ್ಜನವಾಗಿವೆ. ಈಗ ಸಿಂಘುವಿನಿಂದಲೂ ದಿಲ್ಲಿಯ ಕಡೆಗೆ ಹೋಗಲು ಜನರಿಗೆ ಅವಕಾಶವಿಲ್ಲ. ಆದರೆ ಕೆಲವು ರೈತರು “ತಾವು ಸ್ಥಳ ಖಾಲಿ ಮಾಡುವುದಿಲ್ಲʼ ಎಂದು ಪಟ್ಟು ಹಿಡಿದಿದ್ದಾರೆ.
ಮನೆಗೆ ಕಳುಹಿಸಿ
ದಿಲ್ಲಿಯಲ್ಲಿ ನಡೆದ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಅನಂತರ ರೈತರ ಧರಣಿ ಅಂತ್ಯಗೊಳಿಸಲು ಯೋಗಿ ಸರಕಾರ ಆದೇಶ ಹೊರಡಿಸಿದೆ. ಸರಕಾರವು ಸ್ಥಳಗಳಿಗೆ ಬಸ್ಸುಗಳನ್ನು ಕಳುಹಿಸಿದ್ದು, ರೈತರನ್ನು ತಮ್ಮ ಮನೆಗಳಿಗೆ ಕರೆದೊಯ್ಯುವಂತೆ ಹೇಳಿದೆ. ಗುರುವಾರ ಬೆಳಗ್ಗೆ ಘಾಜಿಯಾಬಾದ್ ಗಡಿಯಲ್ಲಿ ಪೊಲೀಸರು ಸಂಜೆಯೊಳಗೆ ಜಾಗ ಖಾಲಿ ಮಾಡಬೇಕೆಂದು ಚಳವಳಿಗಾರರಿಗೆ ಸೂಚಿಸಲಾಗಿತ್ತು.
ಬುಧವಾರ ರಾತ್ರಿ ಭಾಗಪತ್‌ನ ರಾಷ್ಟ್ರೀಯ ಹೆದ್ದಾರಿಯಿಂದ ಪ್ರತಿಭಟನಕಾರರ ಬಿಡಾರಗಳನ್ನು ಪೊಲೀಸರು ಕಿತ್ತುಹಾಕಿದ್ದಾರೆ. ಕೆಲವರು ಪ್ರತಿಭಟಿಸಿದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿಯೂ ಸಂಚಾರ ನಿರ್ಬಂಧಿಸಲಾಗಿದೆ.