ಹೊಸದಿಲ್ಲಿ : ಐದು ಮಕ್ಕಳ ತಂದೆಯಾಗಿದ್ದು ವೃತ್ತಿಯಲ್ಲಿ ಟೈಲರ್ ಆಗಿರುವ ದಿಲ್ಲಿಯ 38 ವರ್ಷ ಪ್ರಾಯದ ಸುನೀಲ್ ರಸ್ತೋಗಿ ಎಂಬಾತ ತಾನು ಕಳೆದ 14 ವರ್ಷಗಳಲ್ಲಿ ನೂರಾರು ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಆನಂದಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆತ ನಡೆಸಿರುವ ಮೂರು ಲೈಂಗಿಕ ಕಿರುಕುಳ ಕೃತ್ಯಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲಿಸರು ಸೆರೆ ಹಿಡಿದಿದ್ದು ತನಿಖೆಯ ವೇಳೆ ಆತ ತನ್ನ ಕಾಮುಕ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ.
ಆರೋಪಿ ರಸ್ತೋಗಿಯು ಕಳೆದ ಹಲವಾರು ವರ್ಷಗಳಲ್ಲಿ ಶಾಲಾ ಬಾಲಕಿಯನ್ನು ದಿಲ್ಲಿ ಹೊರಗೆ ಕರೆದೊಯ್ದು ಅವರ ಹೆತ್ತವರಿಗೆ ಹೊಸದಾಗಿ ಹೊಲಿಯಲಾದ ಬಟ್ಟೆಗಳನ್ನು ಕಳುಹಿಸಲಿಕ್ಕಿದೆ ಎಂದು ನಂಬಿಸಿ, ನಿರ್ಜನ ಪ್ರದೇಶಗಳಿಗೆ ಒಯ್ದು ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೋಗಿ ಬಾಯಿ ಬಿಟ್ಟಿರುವ ತನ್ನ ಕಾಮಕತನದ ಹಲವಾರು ಪ್ರಕರಣಗಳನ್ನು ಕೇಳಿ ಪೊಲೀಸರು ದಂಗಾಗಿ ಹೋಗಿದ್ದಾರೆ. ಇಷ್ಟು ದೀರ್ಘಕಾಲ, ಸರಿಸುಮಾರು 14 ವರ್ಷಗಳ ಕಾಲ, ಈತ ಯಾರ ಕಣ್ಣಿಗೂ ಬೀಳದೆ, ಯಾರ ಆರೋಪಕ್ಕೂ ಗುರಿಯಾಗದೆ ಹೇಗೆ ತಪ್ಪಿಸಿಕೊಂಡ ಎಂದವರು ಆಶ್ಚರ್ಯಪಟ್ಟಿದ್ದಾರೆ. ವಿಶೇಷವೆಂದರೆ 2006ರಲ್ಲಿ ಈತನ ವಾಸವಾಗಿದ್ದ ಉತ್ತರಾಖಂಡದ ರುದ್ರಾಪುರದಲ್ಲಿ ಒಮ್ಮೆ ಈ ಬಂಧಿತನಾಗಿ ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.
ರಸ್ತೋಗಿ ಹೇಳಿರುವಂತೆ ಆತ 7ರಿಂದ 10 ವರ್ಷ ಪ್ರಾಯದ ಬಾಲಕಿಯನ್ನು ತನ್ನ ಕಾಮುಕ ಕೃತ್ಯಕ್ಕಾಗಿ ಶೋಷಿಸುತ್ತಿದ್ದ. ಶಾಲೆ ಬಿಟ್ಟು ಸಂಜೆ ಮನೆಗೆ ಹೋಗುವ ಬಾಲಕಿಯರನ್ನೇ ಈತ ಗುರಿ ಇರಿಸಿಕೊಂಡು ಅವರನ್ನು ಕರೆದು “ನಿನ್ನ ತಂದೆ/ತಾಯಿ ನಿನಗೆ ಕೊಡಲೆಂದು ಕೆಲವು ವಸ್ತುಗಳನ್ನು/ಬಟ್ಟೆ ಬರೆಗಳನ್ನು ನನ್ನ ಬಳಿ ಕೊಟ್ಟಿದ್ದಾರೆ; ಅವುಗಳು ತೆಗೆದುಕೊಂಡು ಹೋಗು’ ಎಂದು ಹೇಳಿ ಬಳಿಕ ಅವರನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಅಲ್ಲಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಓಂವೀರ್ ಸಿಂಗ್ ಹೇಳಿದ್ದಾರೆ.
ರಸ್ತೋಗಿಗೆ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಪೊಲೀಸರೀಗ ಆತನ ಮೂವರು ಪುತ್ರಿಯರಿಗೆ ಕೌನ್ಸೆಲಿಂಗ್ ನಡೆಸುತ್ತಿದ್ದ ಅವರು ಕೂಡ ಖುದ್ದು ತಂದೆಯೇ ಕಾಮುಕತನಕ್ಕೆ ಬಲಿಯಾಗಿದ್ದಾರೆಯೇ ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
ರಸ್ತೋಗಿ ಈ ಹಿಂದೆ 2004ರಲ್ಲಿ ಪೂರ್ವ ದಿಲ್ಲಿಯಲ್ಲಿ ತಾನು ವಾಸವಾಗಿದ್ದಾಗ ತನ್ನ ನೆರೆಮನೆಯಾತನ ಮಗಳ ಮೇಲೆ ಲೈಂಗಿಕ ದಾಳಿ ನಡೆಸಿದ್ದ. ಆಗ ಆತನನ್ನು ನೆರೆಮನೆಯವರು ಅಟ್ಟಾಡಿಸಿ ಹಲ್ಲೆ ಗೈದಿದ್ದರು. ಆದರೆ ಅನಂತರವೂ ರಸ್ತೋಗಿ ಈ ಪ್ರದೇಶಕ್ಕೆ ಬಂದು ಹೋಗುತ್ತಲೇ ಇದ್ದ.
ಇದೇ ಜನವರಿ 10ರಂದು ರಸ್ತೋಗಿ 9 ಮತ್ತು 10 ವರ್ಷ ಪ್ರಾಯದ ಇಬ್ಬರು ಹುಡುಗಿಯರ ಮೇಲೆ ಲೈಂಗಿಕ ದಾಳಿ ನಡೆಸಿದ್ದ. ಆಗ ಆ ಬಾಲಕಿಯರ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಒಡನೆಯೇ ಪೊಲೀಸರು ಆತನನ್ನು ಬಂಧಿಸಿದ್ದರು.
ಇದೇ ವೇಳೆ ಇನ್ನೊಂದು ಪುಟ್ಟ ಬಾಲಕಿಯ ದೂರಿನ ಮೇಲೆ ಪೊಲೀಸರು ರಸ್ತೋಗಿಯ ವಿರುದ್ಧ ಡಿ.13ರಂದು ರೇಪ್ ಕೇಸ್ ದಾಖಲಿಸಿದ್ದಾರೆ. ರಸ್ತೋಗಿಯು ಬಾಲಕಿಯನ್ನು ಅಪಹರಿಸುವ ಸಿಸಿಟಿವಿ ಚಿತ್ರಿಕೆಯು ಪೊಲೀಸರಿಗೆ ನೆರವಾಗಿದೆ. ಸ್ಕೂಲ್ ಡ್ರಾಪ್ ಔಟ್ ಆಗಿರುವ ರಸ್ತೋಗಿಯ ವಿರುದ್ಧ ಡ್ರಗ್ಸ್, ಕಳ್ಳತನ ಹಾಗೂ ವಿವಿಧೆಡೆ ನಡೆಸಲಾದ ಲೈಂಗಿಕ ಕಿರುಕುಳದ ಆರೋಪಗಳಿವೆ.
ರಸ್ತೋಗಿ ಮೂಲತಃ ಉತ್ತರ ಪ್ರದೇಶದವನು. 1990ರಲ್ಲಿ ಆತ ತನ್ನ ಕುಟುಂಬದೊಂದಿಗೆ ದಿಲ್ಲಿಗೆ ಬಂದು ಇಲ್ಲಿ ನೆಲೆಸಿದ.