ಹೊಸದಿಲ್ಲಿ: ಸಿಎಎ ವಿರುದ್ಧ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಯಾರನ್ನೇ ಆಗಲಿ ಬಿಡುವುದಿಲ್ಲ. ಮೇಲ್ನೋಟಕ್ಕೆ ಸಿಕ್ಕ ಸಾಕ್ಷಿಗಳನ್ನು ಗಮನಿಸಿದರೆ, ದಿಲ್ಲಿ ಗಲಭೆಗಳು ಪೂರ್ವ ನಿಯೋಜಿತ ಎನ್ನುವುದು ಸ್ಪಷ್ಟ ಎಂದು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗಲಭೆಗಳಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಚರ್ಚೆಯ ಬಳಿಕ ಮಾತನಾಡಿದ ಅವರು ಈ ಅಂಶ ಸ್ಪಷ್ಟಪಡಿಸಿದ್ದಾರೆ.
ದಿಲ್ಲಿ ಪೊಲೀಸರು ಪರಿಸ್ಥಿತಿಯನ್ನು 36 ಗಂಟೆಗಳೊಳಗೆ ನಿಯಂತ್ರಣಕ್ಕೆ ತಂದಿದ್ದಾರೆ. 2647 ಮಂದಿಯನ್ನು ಬಂಧಿಸಿದ್ದಾರೆ. ಜನರೇ ನಮಗೆ ವಿಡಿಯೊ ಸಾಕ್ಷಿಗಳನ್ನು ಕಳುಹಿಸಿದ್ದಾರೆ. ಇದನ್ನು ವಿವರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಘಟನೆಯಲ್ಲಿ ಸತ್ತವರು 52 ಭಾರತೀಯರು ಎನ್ನುವುದು ನಮಗೆ ಮುಖ್ಯವೇ ಹೊರತು, ಹಿಂದೂ-ಮುಸ್ಲಿಂ ಎಂಬ ವಿಚಾರವೇ ಅಲ್ಲ ಎಂದಿದ್ದಾರೆ.
ರೋಮ್ ಹೊತ್ತಿ ಉರಿಯುತ್ತಿದ್ದಾಗ ನಿರೋ ಪಿಟೀಲು ಬಾರಿಸುತ್ತಿದ್ದ ಎಂಬಂತೆ ಗಲಭೆ ವೇಳೆ ಸಚಿವರು ನಿಷ್ಕ್ರಿಯರಾಗಿದ್ದರು ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ನಾನು ಅಮೆರಿಕ ಅಧ್ಯಕ್ಷರ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಸತತವಾಗಿ ಸಭೆಗಳಲ್ಲಿ ಮಗ್ನನಾಗಿದ್ದೆ’ ಎಂದರು.
ವಾಗ್ಧಾಳಿ: ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ರೋಮ್‌ಗೆ ಬೆಂಕಿ ಬಿದ್ದಾಗ ನೀರೊ ದೊರೆ ಪಿಟೀಲು ಬಾರಿಸುತ್ತಿದ್ದ ಹಾಗೆ, ದಿಲ್ಲಿಯಲ್ಲಿ ಗಲಭೆ ನಡೆಯುತ್ತಿದ್ದರೂ, ಪ್ರಧಾನಿ ಮೋದಿ ಮಾತ್ರ ಅಮೆರಿಕ ಅಧ್ಯಕ್ಷ ಟ್ರಂಪ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ಟೀಕಿಸಿದರು. ಜತೆಗೆ ಸರಕಾರ ಯಾವುದೇ ಮುನ್ನಚ್ಚರಿಕೆ ವಹಿಸಲಿಲ್ಲ ಎಂದು ಆರೋಪಿಸಿದರು.
ಅಮಾನತು ವಾಪಸ್
ಸ್ಪೀಕರ್ ಟೇಬಲ್ ಮೇಲಿದ್ದ ದಾಖಲೆಗಳನ್ನು ಸೆಳೆದು, ಹರಿದು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಏಳು ಮಂದಿ ಸಂಸದರ ಅಮಾನತನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಸಂಸತ್ ಸದಸ್ಯರ ವರ್ತನೆ ಖಂಡಿಸಿ ಸ್ಪೀಕರ್ ಓಂ ಬಿರ್ಲಾ ಕಲಾಪಕ್ಕೆ ಹಾಜರಾಗಿರಲಿಲ್ಲ. ಬುಧವಾರ ಕಲಾಪಕ್ಕೆ ಹಾಜರಾಗುತ್ತಿದ್ದಂತೆಯೇ ಆದೇಶ ವಾಪಸ್ ಪಡೆದರು. ಅದಕ್ಕೆ ಸಂಬಂಧಿಸಿದ ಮಸೂದೆಯನ್ನೂ ಅನುಮೋದಿಸಲಾಗಿದೆ.