ಹೊಸದಿಲ್ಲಿ: ಮತ್ತೆ ಕೋವಿಡ್ ಭೀತಿಗೆ ಕಾರಣವಾಗಿರುವ ಒಮಿಕ್ರಾನ್ ರೂಪಾಂತರಿ ತಳಿ ತಾಗಿರುವ ಮತ್ತೊಂದು ಪ್ರಕರಣ ದೇಶದಲ್ಲಿ ಪತ್ತೆಯಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಐದಕ್ಕೇರಿದೆ.
ತಾಂಜಾನಿಯಾದಿಂದ ಬಂದ ವ್ಯಕ್ತಿಯಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದರು. ಸೋಂಕಿತ ವ್ಯಕ್ತಿಯನ್ನು ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಇಲ್ಲಿಯವರೆಗೆ, ಕೋವಿಡ್ -19 ಗೆ ಪರೀಕ್ಷೆ ಮಾಡಿದ 17 ಜನರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹನ್ನೆರಡು ಮಾದರಿಗಳಿಗೆ ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗಿದೆ. ಹನ್ನೆರಡು ಮಾದರಿಗಳಲ್ಲಿ ಒಂದರಲ್ಲಿ ಒಮಿಕ್ರಾನ್ ರೂಪಾಂತರವಿದೆ” ಎಂದು ಸತ್ಯೇಂದ್ರ ಜೈನ್ ಭಾನುವಾರ ಮಾಹಿತಿ ನೀಡಿದರು.
ಇದನ್ನೂ ಓದಿ:ಚಿಕ್ಕಮಗಳೂರು: ಒಂದೇ ಶಾಲೆಯ 67 ಮಂದಿಯಲ್ಲಿ ಕೋವಿಡ್ ಸೋಂಕು ದೃಢ; ಶಾಲೆ ಸೀಲ್ ಡೌನ್
ದೇಶದ ಮೊದಲೆರಡು ಒಮಿಕ್ರಾನ್ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿತ್ತು. ನಂತರ ಒಂದು ಪ್ರಕರಣ ಗುಜರಾತ್ ನಲ್ಲಿ, ಮತ್ತೊಂದು ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆಯಾಗಿತ್ತು. ಇದೀಗ ದೆಹಲಿ ಪ್ರಕರಣದಿಂದ ದೇಶದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಐದಕ್ಕೇರಿದೆ.