ನವದೆಹಲಿ: ದೆಹಲಿಯಲ್ಲಿ ಇಂದು (ಮಂಗಳವಾರ-ಜ-4) 5,481 ಕೋವಿಡ್ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಇದು ಕಳೆದ 7 ತಿಂಗಳ ಬಳಿಕದ ಗರಿಷ್ಠ ಸಂಖ್ಯೆಯಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಏರಿಕೆ ಕಂಡ ಕೋವಿಡ್ ಪ್ರಕರಣ : 2,479 ಮಂದಿಯಲ್ಲಿ ಸೋಂಕು ದೃಢ, ನಾಲ್ಕು ಸಾವು
ಮೇ 16ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ 6,456 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 262 ಮಂದಿ ಸಾವನ್ನಪ್ಪಿದ್ದರು. ಪಾಸಿಟಿವಿಟಿ ದರ ಶೇ.10.4ರಷ್ಟಿತ್ತು. ಮಂಗಳವಾರ ದೆಹಲಿಯಲ್ಲಿ 5,481 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಮೂವರು ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಅಲ್ಲದೇ ಪಾಸಿಟಿವಿಟಿ ದರ ಶೇ.8.42ರಷ್ಟಿದೆ ಎಂದು ವರದಿ ವಿವರಿಸಿದೆ.
ದೆಹಲಿ ಸರ್ಕಾರ ನೀಡಿರುವ ಅಂಕಿಅಂಶದ ಪ್ರಕಾರ, ವಿವಿಧ ಆಸ್ಪತ್ರೆಗಳಲ್ಲಿ 531 ಕೋವಿಡ್ ಸೋಂಕು ದೃಢಪಟ್ಟವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 14 ಮಂದಿ ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದು, 168 ರೋಗಿಗಳು ಆಕ್ಸಿಜನ್ ಸಪೋರ್ಟ್ ನಲ್ಲಿದ್ದಿರುವುದಾಗಿ ವರದಿ ಹೇಳಿದೆ.
ಕಡಿಮೆ ಪ್ರಮಾಣದ ರೋಗ ಲಕ್ಷಣ ಹೊಂದಿರುವ 308 ರೋಗಿಗಳು ಆಕ್ಸಿಜನ್ ನೆರವಿಲ್ಲದೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ದೆಹಲಿಯಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.