Advertisement

ದೆಹಲಿಯಲ್ಲಿ ಅತಿ ಹೆಚ್ಚು ಮಾನವ ಕಳ್ಳಸಾಗಣೆ ಪ್ರಕರಣ: ಎನ್‌ಸಿಆರ್‌ಬಿ ಅಧ್ಯಯನ ವರದಿ

05:50 PM Aug 30, 2022 | Team Udayavani |

ದೆಹಲಿ: ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ,  2021 ರಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿದ್ದು, 2020 ರಲ್ಲಿ ಪ್ರಕರಣಗಳಲ್ಲಿ ಶೇಕಡಾ 73.5ರಷ್ಟು ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ಅಧ್ಯಯನ ವರದಿ ತಿಳಿಸಿದೆ.

Advertisement

ವರದಿಯ  ಪ್ರಕಾರ, ಮಾನವ ಕಳ್ಳಸಾಗಣೆಗೊಳಗಾದವರಲ್ಲಿ ಹೆಚ್ಚಿನವರನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದು ಅವರಲ್ಲಿ ಕೆಲವರು ಲೈಂಗಿಕ ಶೋಷಣೆ, ಮನೆಯ ಚಾಕರಿ ಮತ್ತು ಸಣ್ಣ ಅಪರಾಧಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ಅಶ್ಲೀಲ ಚಿತ್ರಗಳು, ಭಿಕ್ಷಾಟನೆ, ಅಂಗಾಂಗ ತೆಗೆದು ಮಾರಾಟ ಮಾಡಲು, ಮಾದಕವಸ್ತು ಕಳ್ಳಸಾಗಣೆಗೆ ಇವರನ್ನು ಬಳಸಿಕೊಂಡಿಲ್ಲ ಎಂದು ತಿಳಿಸಿದೆ.  2021ರಲ್ಲಿ ಮಾನವ ಕಳ್ಳಸಾಗಣೆಯ ಎಲ್ಲಾ 509 ಜನರನ್ನು ರಕ್ಷಿಸಲಾಗಿದೆ ಎಂದು ವರದಿ ವಿವರಿಸಿದೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2021 ರಲ್ಲಿ 509 ಜನರನ್ನು ಕಳ್ಳಸಾಗಣೆ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಪುರುಷರು ಮತ್ತು 143 ಮಹಿಳೆಯರು.  ದೆಹಲಿಯಲ್ಲಿ ಮಾನವ ಕಳ್ಳಸಾಗಣೆಗೆ ಸಿಲುಕಿದ 437 ಮಂದಿಯಲ್ಲಿ 100 ಹುಡುಗಿಯರು ಸೇರಿದಂತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.ಅವರಲ್ಲಿ 43 ಮಹಿಳೆಯರು ಸೇರಿದಂತೆ 72 ವಯಸ್ಕರು ಸೇರಿದ್ದಾರೆ.

ವರದಿ ಪ್ರಕಾರ,  2021 ರಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ 174 ವ್ಯಕ್ತಿಗಳನ್ನು ಬಂಧಿಸಲಾಗಿದೆ. 13 ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಕೋರ್ಟ್‌ ಯಾರನ್ನೂ ಅಪರಾಧಿ ಅಥವಾ ನಿರಪರಾಧಿ ಎಂದು ಹೇಳಿಲ್ಲ.

ಇದನ್ನೂ ಓದಿ:ಬೆಕ್ಕಿನ ಕಿರುಚಾಟಕ್ಕೆ ಅಮಾಯಕ ಬಲಿ…ಏನಿದು ವಿಚಿತ್ರ ಘಟನೆ?

Advertisement

2020 ರಲ್ಲಿ ಇಡೀ ರಾಷ್ಟ್ರವು  ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಆಗಿತ್ತು.  ಲಾಕ್‌ಡೌನ್‌ ಬಳಿಕ ಜನರ ಸಂಚಾರವು ಪುನರಾರಂಭಗೊಂಡಾಗ ನಗರದಲ್ಲಿ  ಮಾನವ ಕಳ್ಳಸಾಗಣೆ ಪ್ರಕರಣ ಹೆಚ್ಚಳವಾಯಿತು. ವಲಸೆ ಹೋಗುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ದೆಹಲಿ ಉದ್ಯೋಗಾವಕಾಶಗಳ ಕೇಂದ್ರವಾಗಿರುವುದರಿಂದ, ಇಲ್ಲಿ  ಯುವಕರು ಮತ್ತು ನಿರುದ್ಯೋಗಿಗಳಿಗೆ ಲಾಭದಾಯಕ ಉದ್ಯೋಗಗಳನ್ನು ನೀಡುತ್ತವೆ ಮತ್ತು ಉತ್ತಮ ಸಂಬಳದ ಆಮಿಷ ಒಡ್ಡುತ್ತಾರೆ. ಈ ಆಮಿಷಕ್ಕೊಳಗಾದವರು ಕಳ್ಳಸಾಗಣೆಯ ಬಲಿಪಶುಗಳಾಗುತ್ತಿದ್ದಾರೆ.  ಕೆಲವೊಂದು ಬಾರಿ ಅವರಿಗೆ ಸಂಬಳ ನೀಡುವುದಿಲ್ಲ ಅಥವಾ ಭರವಸೆ ನೀಡಿದ್ದಕ್ಕಿಂತ ಕಡಿಮೆ ಪಾವತಿಸಲಾಗುತ್ತದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next