ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ದುಷ್ಪರಿಣಾಮ ಬೀರುವ ಕೃತ್ಯಗಳು) ಮತ್ತು 295ಎ (ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ರತನ್ ಲಾಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಮೂಲದ ವಕೀಲರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ರತನ್ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ದೂರಿನಲ್ಲಿ, ಲಾಲ್ ಇತ್ತೀಚೆಗೆ “ಶಿವಲಿಂಗದ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ:ಧಾರವಾಡದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ಢಿಕ್ಕಿ; ಮಕ್ಕಳು ಸೇರಿ ಸ್ಥಳದಲ್ಲೇ 7 ಜನ ಸಾವು
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಿಕ್ಕಿರುವ ‘ಶಿವಲಿಂಗ’ದ ವಿಚಾರವಾಗಿ ಈ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದ್ದು, ಇದು ಅತ್ಯಂತ ಸೂಕ್ಷ್ಮ ಸ್ವರೂಪದ್ದಾಗಿದ್ದು, ಈ ವಿಷಯ ನ್ಯಾಯಾಲಯದ ಮುಂದೆ ಬಾಕಿ ಇದೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.