ಹೊಸದಿಲ್ಲಿ: ಚೀನ ರಾಜಧಾನಿ ಬೀಜಿಂಗ್ ಮೀರಿಸುವ ಪರಿಸರ ಮಾಲಿನ್ಯ ಎದುರಿಸುತ್ತಿರುವ ನವದಿಲ್ಲಿಯಲ್ಲಿ ರವಿವಾರ ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರೋಗ್ಯವಂತ ವ್ಯಕ್ತಿಗೂ ಉಸಿರಾಡಲು ವಾತಾವರಣ ಸೂಕ್ತವಲ್ಲ ಎಂದು ಹವಾಮಾನ ವಿಶ್ಲೇಷಣೆ ಸಂಸ್ಥೆಗಳು ವರದಿ ಮಾಡಿವೆ. ತುರ್ತು ಪರಿಸ್ಥಿತಿ ಮಟ್ಟಕ್ಕೆ ಸಮೀಪದಲ್ಲಿ ಪಿಎಂ2.5 ಮತ್ತು ಪಿಎಂ10 ಮಾಪನದ ಅಂಕಿ ಅಂಶಗಳಿದ್ದು, ರವಿವಾರ ಮಧ್ಯಾಹ್ನ ಪ್ರತಿ ಕ್ಯೂಬಿಕ್ ಮೀಟರ್‌ಗೆ 478 ರಿಂದ 713 ಮೈಕ್ರೋಗ್ರಾಂಗಳಷ್ಟಿತ್ತು. 100 ಮೀಟರಿಗಿಂತ ದೂರದ ಸಾಮಗ್ರಿ ಕಾಣದಷ್ಟು ಮಂಜು ಮತ್ತು ಧೂಳು ವಾತಾವರಣವನ್ನು ಆವರಿಸಿಕೊಂಡಿದೆ.
ಜನರಿಗೆ ಕಣ್ಣು ಉರಿ ಮತ್ತು ಉಸಿರು ಕಟ್ಟಿಕೊಂಡ ಅನುಭವ ಉಂಟಾಗುತ್ತಿದ್ದು, ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವಿಕೆ ಪ್ರಮಾಣವೂ ಹೆಚ್ಚಾಗಿದೆ. ದಿಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಮಾಲಿನ್ಯ ಹೆಚ್ಚಳಕ್ಕೆ ಕಾರಣವೇ ಭೂಮಟ್ಟದಲ್ಲಿ ಗಾಳಿಯ ವೇಗ ಕಡಿಮೆಯಾಗಿದ್ದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಭೂಮಟ್ಟದಲ್ಲಿ ಗಾಳಿಯ ವೇಗ ಕಡಿಮೆಯಾಗಿದ್ದರಿಂದಾಗಿ ಮಾಲಿನ್ಯವು ವಾತಾವರಣದ ಮೇಲಿನ ಪದರಕ್ಕೆ ಚಲಿಸುತ್ತಿಲ್ಲ. ಇದರ ಜತೆ ಮೋಡ ಕಟ್ಟಿಕೊಂಡಿದ್ದು, ತಾಪಮಾನವೂ ಇಳಿಕೆ ಕಂಡಿದೆ.
ಒಂದು ವಾರದ ರಜೆಯ ಬಳಿಕ ಶೈಕ್ಷಣಿಕ ಸಂಸ್ಥೆಗಳು ಸೋಮವಾರ ಪುನಾರಂಭವಾಗಲಿವೆ.ಹಲವು ರೈಲುಗಳು ವಿಳಂಬಗೊಂಡಿದ್ದು, ವೇಳಾಪಟ್ಟಿಯನ್ನೂ ಬದಲಿಸಲಾಗಿದೆ.
ಮಳೆಯ ನಿರೀಕ್ಷೆ: ಮಂಗಳವಾರ ಹಾಗೂ ಬುಧವಾರ ಮಳೆ ಬರುವ ಮುನ್ಸೂಚನೆಯಿದ್ದು, ಇದು ಮಾಲಿನ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಮಳೆಯಿಂದಾಗಿ ವಾತಾವರಣದಲ್ಲಿರುವ ಮಲಿನ ಕಣಗಳು ನೀರಿನ ಕಣದೊಂದಿಗೆ ಭೂಮಿಗೆ ಸೇರುತ್ತವೆ.
ಎನ್‌ಜಿಟಿ ಮುಂದೆ ಇಂದು ದಿಲ್ಲಿ ಸರಕಾರದ ಅರ್ಜಿ
ಬೆಸ-ಸಮ ಸಂಚಾರ ವ್ಯವಸ್ಥೆ ಜಾರಿಗೆ ಅನುವು ಮಾಡಿಕೊಡಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮುಂದೆ ದಿಲ್ಲಿ ಸರಕಾರ ಸೋಮವಾರ ಅರ್ಜಿ ಸಲ್ಲಿಸಲಿದೆ. ಮಹಿಳೆಯರು, ದ್ವಿಚಕ್ರ ವಾಹನ ಸವಾರ ರಿಗೆ ನೀಡಿದ್ದ ವಿನಾಯಿತಿಯನ್ನು ಎನ್‌ಜಿಟಿ ರದ್ದು ಮಾಡಿದ್ದರಿಂದ ಬೆಸ-ಸಮ ವ್ಯವಸ್ಥೆಯ ನ್ನು ಕೇಜ್ರಿವಾಲ್ ಸರಕಾರ ರದ್ದು ಮಾಡಿತ್ತು.