Advertisement

ದೆಹಲಿಯಲ್ಲೀಗ ಉಸಿರಾಟವೇ ಕಷ್ಟ!

06:00 AM Nov 09, 2017 | |

ನವದೆಹಲಿ: ರಾಷ್ಟ್ರರಾಜಧಾನಿಯ ವಾಯುಮಾಲಿನ್ಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಉಸಿರಾಟವೂ ಕಷ್ಟ ಎನ್ನುವಷ್ಟು ಗಂಭೀರ ಸ್ಥಿತಿ ನಿರ್ಮಾಣವಾಗಿದೆ. 

Advertisement

ಬುಧವಾರ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ)”ಉಸಿರಾಟ ತುರ್ತು ಪರಿಸ್ಥಿತಿ’ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಪ್ರಾಥಮಿಕ ಶಾಲೆಗಳಿಗೆ ನೀಡಿದ್ದ ಒಂದು ದಿನದ ರಜೆಯನ್ನು ಭಾನುವಾರದ ತನಕ ವಿಸ್ತರಿಸಿ ಆದೇಶ ಹೊರಡಿಸಿದೆ. ಕಟ್ಟಡ ನಿರ್ಮಾಣ ಹಾಗೂ ಕೆಡವುವ ಕಾಮಗಾರಿಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಆದೇಶಿಸಲಾಗಿದೆ.

ಕಳೆದೆರಡು ದಿನಗಳಿಂದ ಬೆಳಗ್ಗೆ 10 ಗಂಟೆಯ ಬಳಿಕವೂ ದೆಹಲಿಯ ಬಹುತೇಕ ಕಡೆಗಳಲ್ಲಿ ಧೂಳು, ಹೊಗೆ ದಟ್ಟವಾಗಿ ಆವರಿಸಿಕೊಂಡಿತ್ತು. ಈ ಕಾರಣ ಹೆಚ್ಚೆಚ್ಚು ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿಲ್ಲ. ಅನೇಕ ಪ್ರದೇಶಗಳಲ್ಲಿ ನಿತ್ಯ ಬಳಕೆ ಸರಬರಾಜು ವಾಹನ ಹೊರತುಪಡಿಸಿ, ದೈತ್ಯ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಬುಧವಾರ ಸಂಜೆಯ ತನಕವೂ ಎಕ್ಯೂಐ ಬೇರೆ ಬೇರೆ ಪ್ರದೇಶಗಳಲ್ಲಿ 448ರಿಂದ 500ರ ಗಡಿದಾಟಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ಮುಂದುವರಿದಿದೆ.

ಉಸಿರಾಡುವುದೇ ಕಷ್ಟವಾದೀತು: ಈ ನಡುವೆ ಭಾರತೀಯ ವೈದ್ಯಕೀಯ ಸಂಘ, ಅಸ್ತಮಾ ಸೇರಿದಂತೆ ಉಸಿರಾಟ ಸಮಸ್ಯೆ ಇರುವವರು ಸಾಧ್ಯವಾದಷ್ಟು ಮನೆಯಿಂದ ಹೊರ ಬರದಂತೆ ಎಚ್ಚರ ವಹಿಸಿ ಎಂದು ಕರೆನೀಡಿದೆ. ಈ ಸಂಬಂಧ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದ್ದಾರೆ.

ಬೀಜಿಂಗ್‌ ಮೀರಿಸಿದ ದೆಹಲಿ: ಈಗಾಗಲೇ ದೆಹಲಿಯಲ್ಲಿ ಎಕ್ಯೂಐ ಬೀಜಿಂಗ್‌ (ಚೀನಾ) ಮೀರಿಸಿದ್ದು, ಕೆಲವು ಕಡೆ-ಮಧ್ಯಾಹ್ನ 2 ಗಂಟೆಯಲ್ಲಿ 1100ರಷ್ಟು ದಾಖಲಾಗಿತ್ತು ಎಂದು ಮಿಂಟ್‌ ವರದಿಮಾಡಿದೆ.

Advertisement

ಸಮ-ಬೆಸ ಇಂದು ನಿರ್ಧಾರ: ಈ ಹಿಂದೆ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆಗಳ ವಾಹನಗಳ ಓಡಾಟ ಯೋಜನೆ ಮತ್ತೆ ಜಾರಿಗೊಳಿಸುವ ಬಗ್ಗೆ ದೆಹಲಿ ಸರ್ಕಾರ ಗುರುವಾರ ನಡೆಯಲಿರುವ ಮಹತ್ವದ ಸಭೆಯಲ್ಲಿ ನಿರ್ಧರಿಸಲಿದೆ. ಪರಿಸ್ಥಿತಿ ಹಿನ್ನೆಲೆಯಲ್ಲಿ ಅದನ್ನು ಕೂಡಲೇ ಜಾರಿಗೆ ಮುಂದಾಗಿ ಎಂದು ಮಂಗಳವಾರವೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸೂಚನೆ ನೀಡಿತ್ತು.

ದೆಹಲಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿರುವ ಕಾರಣ ನಾನೇ ಖುದ್ದಾಗಿ ಹೋಗಿ ಹರ್ಯಾಣ ಮುತ್ತು ಪಂಜಾಬ್‌ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇನೆ. 35 ವರ್ಷಗಳಿಂದ ದೆಹಲಿಯಲ್ಲಿದ್ದೇನೆ, ಇಂಥ ಸ್ಥಿತಿ ಕಂಡಿರಲಿಲ್ಲ.
– ಅರವಿಂದ್‌ ಕೇಜ್ರಿವಾಲ್‌, ದೆಹಲಿ ಸಿಎಂ

ಉಸಿರಾಟಕ್ಕೂ ತೊಂದರೆ ಎನ್ನುವ ಪರಿಸ್ಥಿತಿ ಮುಂದುವರಿದ ಕಾರಣ ಭಾನುವಾರದ ತನಕ ಪ್ರಾಥಮಿಕ ಶಾಲೆಗಳನ್ನು ತೆರೆಯದಂತೆ ಆದೇಶ ನೀಡಲಾಗಿದೆ. ಮಕ್ಕಳ ಆರೋಗ್ಯ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಎಕ್ಯೂಐ 500 ಗಡಿ ದಾಟಿರುವುದು ಅಪಾಯಕ್ಕೆ ಮುನ್ಸೂಚನೆ.
– ಮನೀಶ್‌ ಸಿಸೋಡಿಯಾ, ಉಪಮುಖ್ಯಮಂತ್ರಿ

ಸಾಮಾನ್ಯವಾಗಿ ಚಳಿ ಶುರುವಾಗುವಾಗ ಸಹಜವಾಗಿ ಈ ಸಮಸ್ಯೆ ಕಂಡುಬರುತ್ತದೆ. ಈ ಭಾರಿ ಸ್ವಲ್ಪಮಟ್ಟಿಗೆ ಜಾಸ್ತಿಯೇ ಇದೆ. ಕಳೆದ ವರ್ಷವೂ ಈ ಸ್ಥಿತಿ ಕಂಡುಬಂದಿತ್ತು. ನಾಸಾ ಉಪಗ್ರಹ ಚಿತ್ರವೊಂದನ್ನು ಬಿಡುಗಡೆ ಮಾಡಿ ಎಚ್ಚರಿಸಿತ್ತು.
– ಅನುಮಿತಾ ರಾಯ್‌ ಚೌಧರಿ, ಕಾರ್ಯನಿರ್ವಹಣಾ 
ನಿರ್ದೇಶಕಿ, ಪರಿಸರ ಮತ್ತು ವಿಜ್ಞಾನ ಕೇಂದ್ರ (ಸಿಎಸ್‌ಇ)

ಪಂಜಾಬ್‌, ಹರ್ಯಾಣ ಜತೆ ಮಾತುಕತೆ
ದಟ್ಟ ಹೊಗೆ, ಧೂಳಿನಿಂದಾಗಿ ದೆಹಲಿಯ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಕೆಡುತ್ತಲೇ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಮತ್ತು ಹರ್ಯಾಣ ಸಿಎಂ ಮನೋಹರಲಾಲ್‌ ಕಟ್ಟರ್‌ ಜತೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ವಾಯುಮಾಲಿನ್ಯ ನಿಯಂತ್ರಿಸದಿದ್ದಲ್ಲಿ ತೀವ್ರ ಕಷ್ಟದ ಸ್ಥಿತಿ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವ ಕೇಜ್ರಿವಾಲ್‌ ಅವರು ಪಂಜಾಬ್‌ ಮತ್ತು ಹರ್ಯಾಣ ಸಿಎಂಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಪಂಜಾಬ್‌, ಹರ್ಯಾಣಗಳಲ್ಲಿ ರೈತರು ಹೊಲದಲ್ಲಿ ಬೆಳೆಗೆ ಬೆಂಕಿ ಹಾಕುವ ಬದಲು ಅನ್ಯ ಮಾರ್ಗ ಅನುಸರಿಸಲು ಸಲಹೆ ನೀಡಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next