Advertisement

ಮೊಬೈಲ್‌ ಡೇಟಾ ಆಧರಿಸಿ ಬೆಂಬಲಿಗರ ಪತ್ತೆ;ತಬ್ಲೀಘಿ ಸಮಾವೇಶದಲ್ಲಿ ಪಾಲ್ಗೊಂಡವರ ಶೋಧಕ್ಕೆ ತಂತ್ರ

03:58 PM Apr 06, 2020 | Hari Prasad |

ನವದೆಹಲಿ: ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ತಬ್ಲೀಘಿ ಸಮಾವೇಶದಲ್ಲಿ ಪಾಲ್ಗೊಂಡು ತಲೆಮರೆಸಿಕೊಂಡಿರುವ ಬೆಂಬಲಿಗರನ್ನು ಅವರ ಸೆಲ್‌ ಫೋನ್‌ ಡೇಟಾದಿಂದ ಪತ್ತೆ ಹಚ್ಚಲಾಗುತ್ತಿದೆ.

Advertisement

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲರ ಮೊಬೈಲ್‌ ಜಿಪಿಎಸ್‌ಗಳನ್ನು ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್‌ ಸಿಬ್ಬಂದಿ ಟ್ರ್ಯಾಕ್‌ ಮಾಡಲಾರಂಭಿಸಿದ್ದಾರೆ. ಈ ಮೂಲಕ, ಸಮಾವೇಶದ ನಂತರ ಅಲ್ಲಿಂದ ಚದುರಿ ಹೋಗಿರುವವರನ್ನು ಪತ್ತೆ ಹಚ್ಚಿ ಅವರನ್ನು ನಿಗಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಈ ಕಾರ್ಯದಲ್ಲಿ ನಾನಾ ರಾಜ್ಯಗಳ ಪೊಲೀಸರೂ ದೆಹಲಿ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.

ಕಳೆದೊಂದು ವಾರದಿಂದ ಸಮರೋಪಾದಿಯಲ್ಲಿ ಸಾಗುತ್ತಿರುವ ಈ ಕೆಲಸದಿಂದ ನೂರಾರು ಜನರನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಇತ್ತೀಚೆಗೆ ಇದೇ ತಂತ್ರದಿಂದ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದ ಭಾರತೀಯ ವಾಯುಸೇನೆಯ ಸಿಬ್ಬಂದಿಯೊಬ್ಬರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಹಾಗೂ ಅವರ ಒಡನಾಟ ಹೊಂದಿರುವ ಎಲ್ಲರನ್ನೂ ನಿಗಾ ವಲಯಕ್ಕೆ ಕಳುಹಿಸಲಾಗಿದೆ.

ಕೆಂಪು ವಲಯ: ಉತ್ತರ ಪ್ರದೇಶದ ಕಾನ್ಪುರದ ಆರು ಪ್ರಾಂತ್ಯಗಳನ್ನು ಕೆಂಪು ವಲಯಗಳೆಂದು ಗುರುತಿಸಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿ ಹಿಂದಿರುಗಿದ್ದ ಕೆಲವರು ಈ ಪ್ರಾಂತ್ಯಗಳಲ್ಲಿ ತಿರುಗಾಡಿದ್ದಾರೆ. ಅವರಲ್ಲಿ ಇಬ್ಬರು ವಿದೇಶಿಗರೂ ಸೇರಿದ್ದಾರೆ. ಅವರಿಂದ ಕೋವಿಡ್ ವೈರಸ್ ಸೋಂಕು ಈ ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಹರಡಿರುವ ಸಾಧ್ಯತೆಗಳಿರುವುದರಿಂದ ಈ ಆರೂ ಪ್ರಾಂತ್ಯಗಳನ್ನು ರೆಡ್‌ ಝೋನ್‌ಗಳೆಂದು ಘೋಷಿಸಲಾಗಿದೆ.

ತಬ್ಲೀಘಿಗಳನ್ನು ಬಯ್ದ ಯುವಕನ ಕೊಲೆ: ದೆಹಲಿಯ ಸಮಾವೇಶಕ್ಕೆ ತೆರಳಿ ಹಿಂದಿರುಗಿದ್ದ ತಬ್ಲಿಘಿ ಸಂಘಟನೆಯ ಸದಸ್ಯರನ್ನು ಸೋಂಕು ಹರಡುವವರು ಎಂದು ಬೈದ ಕಾರಣಕ್ಕಾಗಿ 29 ವರ್ಷದ ಯುವಕನೊಬ್ಬನನ್ನು ಆತನ ಮನೆಯ ಮುಂದೆ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾನುವಾರ ನಡೆದಿದೆ.

Advertisement

ಪ್ರಯಾಗ್‌ ರಾಜ್‌ನ ಕಾರೇಲಿಯಲ್ಲಿರುವ ತನ್ನ ಮನೆಯ ಮುಂದೆ ಯುವಕ ನಿಂತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಗಮಿಸಿ ಆತನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

ದಕ್ಷಿಣ ಆಫ್ರಿಕಾ ಪ್ರಜೆ ಸಾವು: ನಿಜಾಮುದ್ದೀನ್‌ ಸಮಾವೇಶಕ್ಕೆ ಹಾಜರಾಗಿ ಹಿಂದಿರುಗಿದ್ದ ದಕ್ಷಿಣ ಆಫ್ರಿಕಾದ ಪ್ರಜೆ ಮೌಲಾನಾ ಯೂಸುಫ್ ತೂತ್ಲಾ (80) ಕೋವಿಡ್ 19 ವೈರಸ್ ಸೋಂಕಿನಿಂದಾಗಿ ಭಾನುವಾರ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next