ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ನಕಲಿ ಕಂಪನಿ ಹೆಸರಿನ ಮೂಲಕ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದ ಆರೋಪದಲ್ಲಿ ಆರ್ಥಿಕ ಅಪರಾಧ ದಳದ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ಮೂಲಗಳು ಶುಕ್ರವಾರ (ಆಗಸ್ಟ್ 21, 2020)ದಂದು ತಿಳಿಸಿವೆ.
ದೆಹಲಿ ಪೊಲೀಸರು ಬಂಧಿಸಿದವರಲ್ಲಿ ಒಬ್ಬರು ದೆಹಲಿ ಮೂಲದ ಉದ್ಯಮಿ ಮುಕೇಶ್ ಶರ್ಮಾ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಗುರುತನ್ನು ಈವರೆಗೂ ಬಹಿರಂಗಪಡಿಸಿಲ್ಲ ಎಂದು ವರದಿ ಹೇಳಿದೆ.
2014ರ ಮಾರ್ಚ್ 31ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಡಿಡಿ (ಡಿಮಾಂಡ್ ಡ್ರಾಫ್ಟ್) ಮೂಲಕ 2 ಕೋಟಿ ರೂಪಾಯಿ ದೇಣಿಗೆ ನೀಡಿರುವ ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಮುಕೇಶ್ ಶರ್ಮಾ ದೆಹಲಿ ಮೂಲದ ತಂಬಾಕು ವ್ಯಾಪಾರಿ ಹಾಗೂ ಪ್ರಾಪರ್ಟಿ ಡೀಲರ್. ಇದರೊಂದಿಗೆ ಅಂದು ದೆಹಲಿ ಸಚಿವ ಸ್ಥಾನದಿಂದ ವಜಾಗೊಂಡು ನಂತರ ಬಿಜೆಪಿ ಸೇರಿದ್ದ ಕಪಿಲ್ ಮಿಶ್ರಾ ಕೂಡಾ ನಕಲಿ ಕಂಪನಿಗಳ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಹಣ ಹರಿದು ಬಂದಿರುವುದಾಗಿ ಆರೋಪಿಸಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ ಎಂದು ವರದಿ ಹೇಳಿದೆ.
ಆಮ್ ಆದ್ಮಿ ಪಕ್ಷಕ್ಕೆ ಬಂದ ದೇಣಿಗೆಯಲ್ಲಿ ಭಾರೀ ಅಕ್ರಮ ನಡೆದಿರುವುದಾಗಿ ಮಿಶ್ರಾ ದೂರಿದ್ದರು. ಅಲ್ಲದೇ ಸಂಶಯಾಸ್ಪದ 2 ಕೋಟಿ ರೂಪಾಯಿ ದೇಣಿಗೆ ಬಗ್ಗೆಯೂ ಪ್ರಶ್ನೆಯನ್ನು ಹುಟ್ಟುಹಾಕಿತ್ತು ಎಂದು ವರದಿ ತಿಳಿಸಿದೆ. ಹಲವಾರು ನಕಲಿ ಕಂಪನಿಗಳು ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡಿದ್ದು, ಇದು ಪಕ್ಷಕ್ಕೂ ಗೊತ್ತಿರುವ ವಿಚಾರವಾಗಿದೆ ಎಂದು ಮಿಶ್ರಾ ದೂರಿದ್ದರು.