ಕಾಸರಗೋಡು: ಹೊಸದಿಲ್ಲಿಯಲ್ಲಿ ಸೆ. 2ರಂದು ಬಂಧಿತನಾದ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಶಹನವಾಜ್ ಅಲಿಯಾಸ್ ಶಾಫಿ ಉಸಾಮ ಈ ಹಿಂದೆ ತನ್ನ ಸಹಚರರೊಂದಿಗೆ ಉಡುಪಿ ಮೂಲಕ ಕಾಸರಗೋಡು ಮತ್ತು ಕಣ್ಣೂರಿಗೂ ಬಂದಿದ್ದ. ಅಲ್ಲದೆ ಕೇರಳದ ಪಶ್ಚಿಮ ಘಟ್ಟಕ್ಕೆ ಸೇರಿದ ಪ್ರದೇಶಗಳಲ್ಲಿ ತಮ್ಮ ಸಂಘಟನೆಯ ಐಸಿಸ್ ಪತಾಕೆಯನ್ನು ಸ್ಥಾಪಿಸಿ ಅಲ್ಲಿಂದ ಹಲವು ಛಾಯಾಚಿತ್ರಗಳನ್ನು ತೆಗೆದಿ ದ್ದನೆಂದೂ ಎನ್‌ಐಎ ತನಿಖೆ ಯಲ್ಲಿ ಸ್ಪಷ್ಟಗೊಂಡಿದೆ.
ಆ ಛಾಯಾಚಿತ್ರಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ. ಆತ ಕೇರಳದಲ್ಲೂ ಬಾಂಬ್ ಸ್ಫೋಟ ನಡೆಸಲು ಯೋಜನೆ ಹಾಕಿದ್ದನೆಂಬ ಕಳವಳಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಪಶ್ಚಿಮ ಘಟ್ಟ ಪರಿಸರದಲ್ಲಿ ತೆಗೆದಿದ್ದ ಫೋಟೋಗಳ ಉದ್ದೇಶವೇನು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
ಶಹನವಾಸ್ ಚಾಟ್ ಅಪ್ಲಿಕೇಶನ್ ಮೂಲಕ ಪಾಕಿಸ್ಥಾನದ ಹ್ಯಾಂಡ್ಲರ್‌ಗಳನ್ನು ಪದೇ ಪದೆ ಸಂಪರ್ಕಿಸುತ್ತಿದ್ದ. ಈತನ ಫೋನ್ ಕರೆ ಪರಿಶೀಲಿಸಿದಾಗ ಆ ಕುರಿತಾದ ಹಲವು ಮಾಹಿತಿಗಳು ಎನ್‌ಐಎಗೆ ಲಭಿಸಿವೆ.
ಶಹನವಾಸ್ ಸಹಚರರಾದ ರಿಜ್ವಾನ್ ಅಶ್ರಫ್‌ನನ್ನು ಲಕ್ನೋದಲ್ಲಿ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು.