ಹೊಸದಿಲ್ಲಿ: ಯಶಸ್ವಿ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡವು ಒಬ್ಬ ಅಪ್ರಾಪ್ತ ಸೇರಿದಂತೆ ಒಂಬತ್ತು ಅಪರಾಧಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇವರುಗಳು ಗುಂಡಿನ ದಾಳಿ, ಸುಲಿಗೆ, ಕೊಲೆಗಳು ಮತ್ತು ಲಾರೆನ್ಸ್ ಬಿಷ್ಣೋಯ್-ಗೋಲ್ಡಿ ಬ್ರಾರ್ ಗ್ಯಾಂಗ್ ಗೆ ಶಸ್ತ್ರಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದಂತೆ ಹಲವು ಪ್ರಕಣಗಳಲ್ಲಿ ಬೇಕಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಇವರುಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಏಳು ಪಿಸ್ತೂಲ್ ಗಳು, 31 ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು 11 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಿಗಳ ಬಂಧನದ ಮೂಲಕ ದೆಹಲಿಯಲ್ಲಿ ಕೆಲವು ಸುಪಾರಿ ಹತ್ಯೆಗಳು ಮತ್ತು ಇತರ ಭಯಾನಕ ಅಪರಾಧಗಳನ್ನು ತಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣೋಯ್ ಮತ್ತು ಬ್ರಾರ್ ಗ್ಯಾಂಗ್ ಗೆ ಸೇರಿದ ಒಂಬತ್ತು ಏಜೆಂಟರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಸೆಲ್) ಪ್ರತೀಕ್ಷಾ ಗೋಡರಾ ತಿಳಿಸಿದ್ದಾರೆ. ತಂಡವನ್ನು ಇನ್ಸ್‌ಪೆಕ್ಟರ್‌ಗಳಾದ ಶಿವಕುಮಾರ್ ಮತ್ತು ಸತೀಶ್ ರಾಣಾ ನೇತೃತ್ವ ವಹಿಸಿದ್ದರು. ಎಸಿಪಿಗಳಾದ ಲಲಿತ್ ಮೋಹನ್ ನೇಗಿ ಮತ್ತು ಹೃದಯ ಭೂಷಣ್ ಮೇಲ್ವಿಚಾರಣೆ ನಡೆಸುತ್ತಿದ್ದರು.
ಅವರಲ್ಲಿ ತಲಾ ಇಬ್ಬರನ್ನು ದೆಹಲಿ, ಯುಪಿ ಮತ್ತು ಪಂಜಾಬ್‌ನಿಂದ ಮತ್ತು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ಬಿಹಾರದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಗೋಡರಾ ಹೇಳಿದರು.