Advertisement

13ನೇ ಐಪಿಎಲ್‌ನಲ್ಲೂ ನಡೆದಿತ್ತೇ ಬೆಟ್ಟಿಂಗ್‌ ಸಂಚು?

10:55 PM Jan 05, 2021 | Team Udayavani |

ಹೊಸದಿಲ್ಲಿ: ಕೊರೊನಾ ನಡುವೆಯೂ ಅರಬ್‌ ನಾಡಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ 13ನೇ ಐಪಿಎಲ್‌ನಲ್ಲಿ ಬೆಟ್ಟಿಂಗ್‌ ಸಂಚು ನಡೆಸಲು ಯತ್ನಿಸಲಾಗಿತ್ತೇ? ಇಂಥದೊಂದು ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಇದರ ಹಿಂದಿದ್ದದ್ದು ದಿಲ್ಲಿ ಮೂಲದ ನರ್ಸ್‌ ಎಂಬುದು ಅಚ್ಚರಿಯ ಸಂಗತಿ!

Advertisement

ಆ ನರ್ಸ್‌ ತಂಡದ ಆಂತರಿಕ ಮಾಹಿತಿಯನ್ನು ಅಕ್ರಮವಾಗಿ ಪಡೆಯಲು ಬಯಸಿದ್ದಳು. ಇದಕ್ಕಾಗಿ ಭಾರತೀಯ ಕ್ರಿಕೆಟಿಗರೊಬ್ಬರನ್ನು ಸಂಪರ್ಕಿಸಿದ್ದಳು ಎಂಬುದು ಮಂಗಳವಾರದ ಬ್ರೇಕಿಂಗ್‌ ನ್ಯೂಸ್‌ ಆಗಿತ್ತು!

ಜಾಲತಾಣದ ಮೂಲಕ ಸಂಪರ್ಕ
ವರದಿಯೊಂದರ ಪ್ರಕಾರ, ಐಪಿಎಲ್‌ ಪಂದ್ಯಗಳಲ್ಲಿ ಬೆಟ್ಟಿಂಗ್‌ ನಡೆಸುವ ವಿಚಾರವಾಗಿ ಆಕೆ ಆಟಗಾರರನ್ನು ಸಂಪರ್ಕಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಆಟಗಾರನನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಲು ಪ್ರಯತ್ನ ನಡೆಸಲಾಗಿತ್ತು ಆದರೆ ಆ ಆಟಗಾರ ಇದಕ್ಕೆ ಪೂರಕವಾಗಿ ಸ್ಪಂದಿಸದ ಕಾರಣ ಸಂದೇಶಗಳನ್ನು ಅಳಿಸಲಾಗಿದೆ. ಐಪಿಎಲ್‌ ಕೂಟದ ಸೆಪ್ಟಂಬರ್‌ ಮಧ್ಯಭಾಗದಲ್ಲಿ ಈ ಘಟನೆ ನಡೆದಿದೆ.

3 ವರ್ಷಗಳಿಂದ ಸಂಪರ್ಕ
ದಿಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಳಂತೆ ಬಿಂಬಿಸಿಕೊಂಡ ಆಕೆ ಭಾರತೀಯ ಕ್ರಿಕೆಟಿಗನೊಬ್ಬನಿಂದ ಈ ಮಾಹಿತಿಯನ್ನು ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಳು. ಆ ಆಟಗಾರ 2 ವರ್ಷಗಳ ಹಿಂದೆ ಟೀಮ್‌ ಇಂಡಿಯಾವನ್ನು ಪ್ರತಿನಿಧಿಸಿದ್ದು, ಕೂಡಲೇ ಈ ವಿಚಾರವನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ವರದಿ ಮಾಡಿದ್ದಾರೆ. ಮೂಲಗಳ ಪ್ರಕಾರ, ಆ ಕ್ರಿಕೆಟಿಗ ಹಾಗೂ ನರ್ಸ್‌ 3 ವರ್ಷಗಳ ಹಿಂದೆಯೇ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಜತೆಗೆ ಆಟಗಾರನ ಅಭಿಮಾನಿಯೆಂದು ಹೇಳಿಕೊಂಡಿದ್ದ ಆಕೆ, ತಾನು ವೈದ್ಯಳಾಗಿದ್ದು, ದಿಲ್ಲಿಯಲ್ಲಿ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಳು ಎನ್ನಲಾಗಿದೆ.

ಇತ್ತೀಚೆಗೆ ಆ ಕ್ರಿಕೆಟಿಗ ಆಕೆಯೊಂದಿಗೆ ಸಂಪರ್ಕದಲ್ಲಿದ್ದು, ಕೊರೊನಾ ವೈರಸ್‌ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಆಕೆಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದ ಎನ್ನಲಾಗಿದೆ.

Advertisement

ತನಿಖೆಯೂ ಪೂರ್ಣವಾಗಿದೆ!
ಇದಕ್ಕೂ ಮಿಗಿಲಾದ ಅಚ್ಚರಿಯೆಂದರೆ, ಈ ವಿದ್ಯಮಾನಕ್ಕೆ ಸಂಭವಿಸಿದ ತನಿಖೆ ಕೂಡ ಪೂರ್ಣಗೊಂಡಿರುವುದು! ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್‌ ಸಿಂಗ್‌ ಇದನ್ನು ಖಚಿತಪಡಿಸಿದ್ದಾರೆ. ಇಂಥದೊಂದು ಪ್ರಕರಣ ಸಂಭವಿಸಿದ್ದು ನಿಜ. ಆದರೆ ಸೂಕ್ತ ತನಿಖೆ ಬಳಿಕ ಪ್ರಕರಣಕ್ಕೆ ಮುಕ್ತಾಯ ಹಾಡಲಾಗಿದೆ ಎಂದಿದ್ದಾರೆ.

“ಐಪಿಎಲ್‌ ಸಂದರ್ಭದಲ್ಲಿಯೇ ಈ ಘಟನೆ ಬಗ್ಗೆ ಕ್ರಿಕೆಟಿಗನಿಂದ ನಮಗೆ ಮಾಹಿತಿ ಬಂದಿತ್ತು. ನಾವು ಈಗಾಗಲೇ ಇದರ ತನಿಖೆ ನಡೆಸಿದ್ದು, ಪ್ರಕರಣ ಮುಕ್ತಾಯ ಕಂಡಿದೆ. ಆಕೆಯಿಂದ ಎಲ್ಲ ವಿವರಗಳನ್ನು ಪಡೆದುಕೊಳ್ಳಲಾಗಿದೆ. ಆಕೆ ಯಾವುದೇ ಬೆಟ್ಟಿಂಗ್‌ ಸಿಂಡಿಕೇಟ್‌ನೊಂದಿಗೆ ಸಂಪರ್ಕ ಹೊಂದಿಲ್ಲ’ ಎಂದಿದ್ದಾರೆ.

ಹೊಸ ಐಪಿಎಲ್‌ ತಂಡಗಳ ಮೂಲಬೆಲೆ 1500 ಕೋ ರೂ.!
ಮುಂಬಯಿ: 2022ರಲ್ಲಿ ಎರಡು ಹೊಸ ತಂಡಗಳು ಐಪಿಎಲ್‌ ಪ್ರವೇಶಿಸುವುದು ಖಚಿತವಾಗಿದೆ. ಆದರೆ ಈ ತಂಡಗಳ ಮಾಲಕತ್ವ ಪಡೆಯಲು ಸಂಬಂಧಪಟ್ಟ ಸಂಸ್ಥೆಗಳು ದುಬಾರಿ ಬೆಲೆ ನೀಡಬೇಕು. ಕಾರಣ ಮೂಲಬೆಲೆ ಆರಂಭವಾಗುವುದೇ 1500 ಕೋಟಿ ರೂ.ಗಳಿಂದ! ಹೀಗೆಂದು ಮೂಲಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next