ಹೊಸದಿಲ್ಲಿ : ಇಲ್ಲಿನ ಪ್ರಸಿದ್ಧ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ “ಇಸ್ಲಾಮಿಕ್ ಭಯೋತ್ಪಾದನೆ’ ಕುರಿತು ಕೋರ್ಸ್ ಆರಂಭಿಸುವ ವಿಷಯ ಇದೀಗ ವಿವಾದಗ್ರಸ್ತವಾಗಿದೆ.
”ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಕೋರ್ಸ್ ಆರಂಭಿಸುವ ಪ್ರಸ್ತಾವದ ಹಿಂದಿರುವ ಕಾರಣವೇನು” ಎಂಬುದನ್ನು ತಿಳಿಸುವಂತೆ ಕೋರಿ ದಿಲ್ಲಿ ಅಲ್ಪಸಂಖ್ಯಾಕ ಆಯೋಗ (ಡಿಎಂಸಿ) ಇಂದು ಮಂಗಳವಾರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ರಿಜಿಸ್ಟ್ರಾರರಿಗೆ ನೊಟೀಸ್ ಕಳುಹಿಸಿದೆ.
ಪ್ರಸ್ತಾವಿತ “ಇಸ್ಲಾಮಿಕ್ ಭಯೋತ್ಪಾದನೆ’ ಕುರಿತ ಕೋರ್ಸ್ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಯನ್ನು ಸ್ವಪ್ರೇರಣೆಯಿಂದ ಗಂಭೀರವಾಗಿ ಪರಿಗಣಿಸಿರುವ ಆಯೋಗ, ಯಾವ ನೆಲೆಯಲ್ಲಿ ಈ ಕೋರ್ಸನ್ನು ಆರಂಭಿಸಲು ವಿಶ್ವವಿದ್ಯಾಲಯ ಉದ್ದೇಶಿಸಿದೆ ಎಂಬುದನ್ನು ಕಾರಣ ಸಹಿತ ತಿಳಿಸುವಂತೆ ಕೋರಿ ವಿವಿ ರಿಜಿಸ್ಟ್ರಾರರಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ಆಯೋಗದ ಮುಖ್ಯಸ್ಥ ಝಫರೂಲ್ ಇಸ್ಲಾಂ ಖಾನ್ ಹೇಳಿದ್ದಾರೆ.
ಕಳೆದ ವಾರ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಎನ್‌ಯು ಪ್ರೊಫೆಸರ್ ಒಬ್ಬರು “ಸೆಂಟರ್ ಫಾರ್ ನ್ಯಾಶನಲ್ ಸೆಕ್ಯುರಿಟಿ ಸ್ಟಡೀಸ್’ ಸ್ಥಾಪಿಸುವ ಪ್ರಸ್ತಾವವನ್ನು ಜೆಎನ್‌ಯು ಅಕಾಡೆಮಿಕ್ ಕೌನ್ಸಿಲ ಪಾಸು ಮಾಡಿದ್ದು ಅದರಡಿ ಇಸ್ಲಾಮಿಕ್ ಭಯೋತ್ಪಾದನೆಯ ಕೋರ್ಸ್ ರೂಪಿಸಲಾಗಿದೆ’ ಎಂದು ಹೇಳಿದರು.
ಪ್ರಸ್ತಾವಿತ ಸೆಂಟರ್ ಫಾರ್ ನ್ಯಾಶನಲ್ ಸೆಕ್ಯುರಿಟಿ ಸ್ಟಡೀಸ್‌ನ ಅಡಿ “ಇಸ್ಲಾಮಿಕ್ ಭಯೋತ್ಪಾದನೆ’ ಯ ಕೋರ್ಸ್ ಆರಂಭಿಸುವ ಪ್ರಸ್ತಾವ ಇದೆಯೇ ಮತ್ತು ಆ ಕುರಿತ ಪರಿಕಲ್ಪನೆಯ ದಾಖಲೆ ಪತ್ರ ಏನಾದರೂ ಇದೆಯೇ ಎಂದು ಡಿಎಂಸಿ ಜೆಎನ್‌ಯು ಆಡಳಿತೆಯನ್ನು ಪ್ರಶ್ನಿಸಿ ಅಂಥದ್ದೇನಾದರೂ ಇದ್ದಲ್ಲಿ ನಮಗೆ ಅವುಗಳ ಪ್ರತಿಯನ್ನು ಕೊಡಿ ಎಂದು ವಿವಿ ರಿಜಿಸ್ಟ್ರಾರರನ್ನು ಕೇಳಿಕೊಂಡಿದೆ.