ನವದೆಹಲಿ: ದೆಹಲಿ ಪುರಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಗಳಿಸಿದ್ದು, ಒಂದು ಸ್ಥಾನ ಕಾಂಗ್ರೆಸ್ ವಶವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಐದು ಟೆಲಿಕಾಂ ವಲಯದಲ್ಲಿ ಸ್ಪೆಕ್ಟ್ರಮ್ ನನ್ನು ಖರೀದಿಸಿದ ವೊಡಾಫೋನ್ ಐಡಿಯಾ..!
ದೆಹಲಿ ಸ್ಥಳೀಯ ಸಂಸ್ಥೆ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿರುವುದು 2022ರ ಚುನಾವಣೆಯಲ್ಲಿ ಬಿಜೆಪಿಗೆ ಸಂದೇಶ ರವಾನಿಸಿದಂತಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದು, ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಬುಧವಾರ(ಮಾರ್ಚ್03) ತಿಳಿಸಿದರು.
ದೆಹಲಿಯ ಐದು ಸ್ಥಳೀಯ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯ ಮತಎಣಿಕೆ ಇಂದು ಬೆಳಗ್ಗೆ ಆರಂಭವಾಗಿದ್ದು, 11ಗಂಟೆಗೆ ಮುಕ್ತಾವಾಗಿರುವುದಾಗಿ ವರದಿ ವಿವರಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕಲ್ಯಾಣ್ ಪುರಿ, ರೋಹಿಣಿ-ಸಿ, ತ್ರಿಲೋಕ್ ಪುರಿ ಮತ್ತು ಶಾಲಿಮಾರ್ ಬಾಗ್ ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಚೌಹಾಣ್ ಬಂಗಾರ್ ವಾರ್ಡ್ ನಲ್ಲಿ ಜಯ ಸಾಧಿಸಿದೆ.
ಭಾರತೀಯ ಜನತಾ ಪಕ್ಷ ಉಪ ಚುನಾವಣೆಯಲ್ಲಿ ಒಂದು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿಲ್ಲ. ದೆಹಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಟ್ವೀಟ್ ನಲ್ಲಿ ತಿಳಿಸಿರುವ ಕೇಜ್ರಿವಾಲ್, ಕೊಳಕು ರಾಜಕೀಯಕ್ಕಿಂತ ಅಭಿವೃದ್ಧಿ ಪರ ಕೆಲಸಕ್ಕೆ ದೆಹಲಿ ಮತದಾರರು ಮತ ನೀಡಿದ್ದಾರೆ. 15 ವರ್ಷಗಳ ಕಾಲ ದೆಹಲಿ ಪುರಸಭೆಯಲ್ಲಿ ಬಿಜೆಪಿ ದುರಾಡಳಿತ ನಡೆಸಿರುವುದಕ್ಕೆ ಉಪಚುನಾವಣೆಯ ಫಲಿತಾಂಶ ಉತ್ತರ ನೀಡಿದೆ ಎಂದು ತಿಳಿಸಿದ್ದಾರೆ.