Advertisement

ಫ‌ಲಪುಷ್ಪ ಪ್ರದರ್ಶನದಲ್ಲಿ ದೆಹಲಿ ಲೋಟಸ್‌ ಟೆಂಪಲ್‌

11:28 AM Oct 08, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕುಪ್ಪಣ್ಣ ಉದ್ಯಾನ (ನಿಶಾದ್‌ಬಾಗ್‌)ನಲ್ಲಿ ಏರ್ಪಡಿಸಿರುವ ದಸರಾ ಫ‌ಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ದೆಹಲಿಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ ಕಮಲ ದೇಗುಲ (ಲೋಟಸ್‌ ಟೆಂಪಲ್‌) ಪ್ರಮುಖ ಆಕರ್ಷಣೆಯಾಗಲಿದೆ. 

Advertisement

ಕುಪ್ಪಣ್ಣ ಉದ್ಯಾನದಲ್ಲಿ 7.40 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗಾಜಿನ ಮನೆಯಲ್ಲಿ ಲೋಟಸ್‌ ಟೆಂಪಲ್‌ ಮಾದರಿಯ ಶ್ವೇತ ವರ್ಣದ ಗುಲಾಬಿ ಮತ್ತು ಆಸ್ಪರಾಗಸ್‌ ಹೂವುಗಳಿಂದ 18 ಅಡಿ ಎತ್ತರ ಮತ್ತು 40 ಅಡಿ ಸುತ್ತಳತೆಯಲ್ಲಿ ವಿವಿಧ ಬಣ್ಣದ 2.50 ಲಕ್ಷ ಗುಲಾಬಿ, ಸೇವಂತಿಗೆ ಹೂವುಗಳಿಂದ ಲೋಟಸ್‌ ಟೆಂಪಲ್‌ ಆಕೃತಿ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷ, ಜಿಪಂ ಸಿಇಒ ಕೆ.ಜ್ಯೋತಿ, ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫಿರಂಗಿ: ಇದಲ್ಲದೇ ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸುತ್ತಿದ್ದ ಫಿರಂಗಿಗಳ ಮಾದರಿಯನ್ನು ಫ‌ಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. 10 ಅಡಿ ಉದ್ದ, 6 ಅಡಿ ಅಗಲ ಮತ್ತು 5 ಅಡಿ ಸುತ್ತಳತೆಯ ಚಕ್ರವನ್ನು ಒಳಗೊಂಡ ಫಿರಂಗಿ ಮಾದರಿಯನ್ನು ಬಿಳಿ ಮತ್ತು ಕೆಂಪು ಗುಲಾಬಿ ಹೂವುಗಳಿಂದ ನಿರ್ಮಿಸಲಾಗುತ್ತಿದೆ. 

ಅಶೋಕಸ್ತಂಭ: 6 ಅಡಿ ಅಗಲ, 4 ಅಡಿ ಎತ್ತರದ ತಳಪಾಯದ ಮೇಲೆ ಸುಮಾರು 20 ಅಡಿ ಎತ್ತರದ ಅಶೋಕ ಸ್ತಂಭದ ಮಾದರಿಯನ್ನು ಕೆಂಪು, ಬಿಳಿ ಹಾಗೂ ಹಳದಿ ಬಣ್ಣದ ಗುಲಾಬಿ ಮತ್ತು ಸೇವಂತಿಗೆ ಹೂವುಗಳಿಂದ ನಿರ್ಮಿಸಲಾಗುವುದು.

ಟ್ರೀ ಹೌಸ್‌: 14 ಅಡಿ ಸುತ್ತಳತೆಯ 10 ಅಡಿ ಎತ್ತರದ ಟ್ರೀ ಹೌಸ್‌ ಮಾದರಿಯನ್ನು ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಆರ್ಕಿಡ್ಸ್‌ ಮತ್ತು ಕಾರ್ನೇಷನ್‌ ಹೂವುಗಳಿಂದ ನಿರ್ಮಿಸಲಾಗುವುದು. 

Advertisement

ಹೆಲ್ಪಿಂಗ್‌ ಹ್ಯಾಂಡ್‌: ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವ 8 ಅಡಿ ಅಳತೆಯ ಎರಡು ಹೆಲ್ಪಿಂಗ್‌ ಹ್ಯಾಂಡ್‌ ಮಾದರಿಯನ್ನು ಮೆಕ್ಸಿಕನ್‌ ಗ್ರಾಸ್‌, ಕೆಂಪು ಮತ್ತು ಬಿಳಿ ಬಣ್ಣದ ಗುಲಾಬಿ ಹೂವುಗಳಿಂದ ನಿರ್ಮಿಸಲಾಗುವುದು.

ಅಮರ್‌ ಜವಾನ್‌: ಎರಡು ವೇದಿಕೆ ಒಳಗೊಂಡ ಸುಮಾರು 12 ಅಡಿ ಎತ್ತರದೊಂದಿಗೆ ಅಮರ್‌ ಜವಾನ್‌ ಸ್ಮಾರಕದ ಮಾದರಿಯನ್ನು ಗುಲಾಬಿ ಹೂವುಗಳಿಂದ ನಿರ್ಮಿಸಲಾಗುವುದು.

ಕೀ ಕೆಟಲ್‌: 10 ಅಡಿ ಸುತ್ತಳತೆಯ ಕಪ್‌ ಮತ್ತು 3 ಅಡಿಯ ಸಾಸರ್‌ ಮಾದರಿಯನ್ನು ವಿವಿಧ ಬಣ್ಣದ ಗುಲಾಬಿ ಹೂವು ಸೇರಿದಂತೆ ಆಸ್ಟರ್‌ ಮತ್ತು ಕಾರ್ನೇಷನ್‌ ಹೂವುಗಳಿಂದ ರೂಪಿಸಲಾಗುತ್ತಿದೆ. 

ಡಾಲ್ಫಿನ್ಸ್‌: 10 ಅಡಿ ಎತ್ತರ ಮತ್ತು 3 ಅಡಿ ಅಗಲದ ಡಾಲ್ಫಿನ್‌ ಮಾದರಿಯನ್ನು ಆಸ್ಟರ್‌ ಮತ್ತು ಕಾರ್ನೇಷನ್‌ ಹೂವುಗಳಿಂದ ನಿರ್ಮಿಸಲಾಗುತ್ತಿದೆ.

ಡೊರೆಮನ್‌ ವಿತ್‌ ಮಷೂಮ್‌: 10 ಅಡಿ ಎತ್ತರ 2 ಅಡಿ ಅಗಲದ ಡೊರೆಮನ್‌, 4 ಅಡಿ ಎತ್ತರ ಮತ್ತು 1 ಅಡಿಯಷ್ಟು ಅಗಲದ ಮಷೂಮ್‌ ಮಾದರಿಗಳನ್ನು ವಿವಿಧ ಬಣ್ಣದ ಗುಲಾಬಿ ಹೂವು ಹಾಗೂ ಕಾರ್ನೇಷನ್‌ ಮತ್ತು ಆಸ್ಟರ್‌ ಹೂವುಗಳಿಂದ ರೂಪಿಸಲಾಗುತ್ತಿದೆ.

ಪೆಂಗ್ವಿನ್‌: ಸಮುದ್ರ ಜೀವಿ ಪೆಂಗ್ವಿನ್‌ನ ಹೂವಿನದ ಮಾದರಿಯನ್ನು 4 ಅಡಿ ಎತ್ತರ ಮತ್ತು 2.5 ಅಡಿಗಳಷ್ಟು ಅಗಲದಲ್ಲಿ ಗುಲಾಬಿ ಮತ್ತು ಆಸ್ಟರ್‌ ಹೂವುಗಳಿಂದ ನಿರ್ಮಿಸಲಾಗುತ್ತಿದೆ.

ಡ್ಯಾನ್ಸಿಂಗ್‌ ಡಾಲ್ಸ್‌: 5 ಅಡಿ ಎತ್ತರದ ಮಹಿಳೆ ಮತ್ತು 6 ಅಡಿ ಎತ್ತರದ ಪುರುಷ ಆಕೃತಿ ಮಾದರಿಯನ್ನು ಆಸ್ಪರಾಗಸ್‌ ಮತ್ತು ಬಹುವರ್ಣದ ಗುಲಾಬಿ ಹೂವುಗಳಿಂದ ಸಿಂಗರಿಸಲಾಗುತ್ತಿದೆ.

ಪಾಟರಿ ಡಾಲ್ಸ್‌ ಕಾನ್ಸೆಪ್ಟ್: 2 ಅಡಿ ಎತ್ತರ, 5 ಅಡಿ ಅಗಲದ ಟೇಬಲ್‌ ಮೇಲೆ 4 ಪಾಟರಿ ಗೊಂಬೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 5 ಟೇಬಲ್‌ಗ‌ಳ ಮೇಲೆ 20 ಗೊಂಬೆಗಳನ್ನು ಗುಲಾಬಿ ಮತ್ತು ಪೆಟೋನಿಯಸ್‌ ಹೂವುಗಳಿಂದ ಸಿಂಗರಿಸಲಾಗುತ್ತಿದೆ.

ಅರಮನೆ ದ್ವಾರ: ಮೈಸೂರು ಅರಮನೆಯ ಪ್ರವೇಶ ದ್ವಾರದಿಂದ ಹೊರಬರುತ್ತಿರುವ 24  ಅಡಿ ಎತ್ತರ, 30 ಅಡಿ ಅಗಲ ಹಾಗೂ 10 ಅಡಿ ಉದ್ದದ ಆನೆಯ ಮಾದರಿಯನ್ನು ವಿವಿಧ ಬಣ್ಣದ ಹೂವುಗಳಿಂದ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next