ಹೈದರಾಬಾದ್ : ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಭಾನುವಾರ ಕೇಂದ್ರ ತನಿಖಾ ದಳ (ಸಿಬಿಐ) ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಸಿಬಿಐ ಅಧಿಕಾರಿಗಳ ತಂಡವು ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ವಿಧಾನ ಪರಿಷತ್ ಸದಸ್ಯೆ ಕವಿತಾ ಅವರ ಬಂಜಾರಾ ಹಿಲ್ಸ್ ನಿವಾಸದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಗಿ ಭದ್ರತೆಯ ನಡುವೆ ಎರಡು ವಾಹನಗಳಲ್ಲಿ ಮಹಿಳಾ ಅಧಿಕಾರಿಗಳ ಸೇರಿ ವಿಚಾರಣೆಗೆ ಆಗಮಿಸಿದ್ದು, ವಿಚಾರಣೆ ಮುಂದುವರಿದಿದೆ. ವಿಚಾರಣೆ ವೇಳೆ ಊಟದ ವಿರಾಮವೂ ಇತ್ತು ಎಂದು ಮೂಲಗಳು ತಿಳಿಸಿವೆ.
ಕವಿತಾ ಅವರ ಬೆಂಬಲಿಗರು ಮತ್ತು ಬಿಆರ್‌ಎಸ್ ಮುಖಂಡರು ಮತ್ತು ಕಾರ್ಯಕರ್ತರು ಅಲ್ಲಿ ಸೇರದಂತೆ ಮನವಿ ಮಾಡಿದ್ದರಿಂದ ಸಿಬಿಐ ಅಧಿಕಾರಿಗಳು ಬರುವ ಮುನ್ನವೇ ಕವಿತಾ ಅವರ ಮನೆಯ ಸುತ್ತಮುತ್ತಲಿನ ಪ್ರದೇಶಗಳು ನಿರ್ಜನವಾಗಿದ್ದವು. ಯಾವುದೇ ಗುಂಪು ಸೇರದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 160 ರ ಅಡಿಯಲ್ಲಿ ಕವಿತಾ ಅವರಿಗೆ ಸ್ಪಷ್ಟೀಕರಣವನ್ನು ಕೋರಿ ಸಿಬಿಐ ನೋಟಿಸ್ ನೀಡಿತ್ತು.ಅಬಕಾರಿ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಪ್ರವೀಣ್ ಕುಮಾರ್ ರೈ ಅವರಿಂದ ಬಂದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ನವೆಂಬರ್ 30 ರಂದು, ದೆಹಲಿ ಮದ್ಯ ನೀತಿ ಹಗರಣದಲ್ಲಿ ಉದ್ಯಮಿ ಅಮಿತ್ ಅರೋರಾ ಅವರ ಬಂಧನಕ್ಕಾಗಿ ಇಡಿ ಬುಧವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಕವಿತಾ ಹೆಸರು ಕಾಣಿಸಿಕೊಂಡಿತ್ತು. ರಿಪೋರ್ಟ್ ಪ್ರಕಾರ, ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಉದ್ಯಮಿ ವಿಜಯ್ ನಾಯರ್ ಅವರು ಶರತ್ ರೆಡ್ಡಿ, ಕವಿತಾ ಮತ್ತು ಮಾಗುಂಟಾ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುತ್ತಿರುವ `ಸೌತ್ ಗ್ರೂಪ್ ಎಂಬ ಗುಂಪಿನಿಂದ ಎಎಪಿ ನಾಯಕರ ಪರವಾಗಿ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಆರೋಪ ಹೊರಿಸಲಾಗಿದೆ.