Advertisement

ದೆಹಲಿ ಕರ್ನಾಟಕ ಸಂಘ: ವಿವಿಧ ಬೇಡಿಕೆ ,ಸಿದ್ದರಾಮಯ್ಯಗೆ ಮನವಿ

02:45 PM Sep 20, 2017 | |

ಮುಂಬಯಿ: ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಅಧೀನ ಕಚೇರಿಯನ್ನು ಪ್ರಾರಂಭಿಸುವಂತೆ ಸೆ. 16ರಂದು ದೆಹಲಿಯ ಕರ್ನಾಟಕ ಭವನದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Advertisement

ರಾಜಧಾನಿ ನವದೆಹಲಿಯಲ್ಲಿರುವ ತಮಿಳುನಾಡು ಭವನವು ಪೋಂಗಲ್‌, ಕೇರಳ ಭವನವು ಓಣಂ, ಮಹಾರಾಷ್ಟ್ರ ಭವನವು ಗಣೇಶ ಹಬ್ಬ, ಗೋವಾ ಭವನವು ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗಳಿಗೆ ತನ್ನತನವನ್ನು ತೋರಿಸಿಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತವೆ. ಆದರೆ ಕನ್ನಡೇತರರನ್ನು ತಲಪುವಲ್ಲಿ ನಮ್ಮ ರಾಜ್ಯದ ಭವನಗಳು ಹಿಂದೆ ಬಿದ್ದಿವೆ ಎನ್ನಬೇಕು. ರಾಜ್ಯದಿಂದ ಬರುವ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಮತ್ತು ವಿವಿಧ ಕಚೇರಿಗಳ ಸಂಪರ್ಕ ಕೊಂಡಿಯಾಗಿ ಸೀಮಿತವಾಗಿ ಈ ಭವನಗಳು ತಮ್ಮ ಕೆಲಸದ ವ್ಯಾಪ್ತಿಯನ್ನು ಸೀಮಿತಗೊಳಿಸಿವೆ. ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನವದೆಹಲಿಯಲ್ಲಿ ತನ್ನ ಕಚೇರಿಯನ್ನು ಹೊಂದಿ, ಕನ್ನಡ ಭಾಷೆ, ಸಂಸ್ಕೃತಿ ಹಾಗು ಕಲೆಗೆ ಒತ್ತುಕೊಟ್ಟು ಕೆಲಸ ಮಾಡಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.

ಅದೇ ರೀತಿ ಒಂದೊಮ್ಮೆ ಕಾಲದಲ್ಲಿ ಉತ್ತಮ ಸಂಪರ್ಕ ಕೇಂದ್ರವಾಗಿದ್ದ ಕರ್ನಾಟಕದ ವಾರ್ತಾ ಕೇಂದ್ರವನ್ನು ಕೂಡಾ ಉತ್ತಮ ಮಟ್ಟಕ್ಕೆ ಏರಿಸಬೇಕಾಗಿದೆ. ಸಿಬಂದಿಗಳಿಗೆ ಸರಿಯಾದ ಕಚೇàರಿಯ ವ್ಯವಸ್ಥೆ, ಹೊರನಾಡಿನಿಂದ ಬರುವವರಿಗೆ ಮಾಹಿತಿ ಮತ್ತು ರಾಜ್ಯದ ಪ್ರಗತಿ ಮತ್ತು ಸಾಧನೆಯನ್ನು ದೇಶದ ರಾಜಧಾನಿಯನ್ನು ಪಸರಿಸುವ ಕೆಲಸವನ್ನು ಮಾಡಬೇಕಾಗಿದೆ. ಕರ್ನಾಟಕವನ್ನು ಹೊರ ರಾಜ್ಯಗಳಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಕೇಂದ್ರಗಳು ರಾಯಭಾರಿಯಾಗಿ ವಿವಿಧ ಕ್ಷೇತ್ರಗಳಲ್ಲಿನ ಮಾಹಿತಿಯನ್ನು ಹೊರನಾಡಿನ ಕನ್ನಡಿಗರೂ, ಕನ್ನಡೇತರರಿಗೂ ಹಾಗೂ ಕನ್ನಡದಲ್ಲಿ ಆಸಕ್ತಿ ಇರುವವರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ಅದರಲ್ಲೂ ಬೇರೆ-ಬೇರೆ ದೇಶಗಳ ರಾಯಭಾರಿ ಕಚೇರಿಗಳು, ಶೈಕ್ಷಣಿಕ  ಮತ್ತು ಸಾಂಸ್ಕೃತಿಕ ಕೇಂದ್ರಗಳು, ಪ್ರಭಾವಶಾಲಿ ವ್ಯಕ್ತಿಗಳು ಇರುವ ರಾಜಧಾನಿ ದೆಹಲಿಯಲ್ಲಿ ಕರ್ನಾಟಕ ವಾರ್ತಾ ಕೇಂದ್ರವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರಚಾರ ಮಾಡಲು ಹಲವು ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಕರ್ನಾಟಕ ಸರ್ಕಾರವು ಈ ಸೌಲಭ್ಯಗಳನ್ನು ಸರಿಯಾಗಿ ಬಳಸಲು ಕಾಯೊìàನ್ಮುಖವಾಗಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.

ವಾರ್ತಾ ಕೇಂದ್ರವು ರಾಜ್ಯದ ಮಂತ್ರಿಗಳ ಭಾಷಣಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವುದಕ್ಕೆ, ಗಣರಾಜ್ಯೋತ್ಸವ ಸ್ಥಬ್ಧಚಿತ್ರಕ್ಕೆ ಮತ್ತು ರಾಜ್ಯೋತ್ಸವ ಸಂದರ್ಭದಲ್ಲಿ ಎರಡು ಮೂರು ದಿನಗಳ ರಾಜ್ಯೋತ್ಸವ ಆಚರಣೆಗಳನ್ನು ನಡೆಸುವುದರ ಜತೆಗೆ ಸಂಪೂರ್ಣ ರಾಜ್ಯದ ಜಾನಪದ, ಕಲೆ, ನಾಟಕ, ಸಂಗೀತ, ಚಾರಿತ್ರಿಕ, ಚಲನಚಿತ್ರ, ಶೈಕ್ಷಣಿಕ ಸಿರಿವಂತಿಕೆಯನ್ನು ಪ್ರಚಾರಪಡಿಸುವ ಕೇಂದ್ರವಾಗಬೇಕು. ಅದಕ್ಕಾಗಿ ಒಂದು ಸುಸಜ್ಜಿತ ಕಚೇರಿ, ಸಿಬಂದಿ ಮತ್ತು ಸಿಬಂದಿಗಳಿಗೆ ಬೇಕಾದ ಪರಿಕರ ಮತ್ತು ಅಧಿಕಾರವನ್ನು ನೀಡಬೇಕು. ದೆಹಲಿಯಲ್ಲಿ ಕರ್ನಾಟಕ ಸಂಘವೂ ಸೇರಿದಂತೆ ಹಲವು ಸಕ್ರಿಯ ಕನ್ನಡಪರ ಸಂಘ ಸಂಸ್ಥೆಗಳಿವೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಭಿನ್ನ ಭಿನ್ನ ಹುದ್ದೆಗಳಲ್ಲಿ ಕನ್ನಡಿಗರಿದ್ದಾರೆ.

ಇವರನ್ನೆಲ್ಲಾ ಒಟ್ಟು ಸೇರಿಸಿ ದೆಹಲಿಯಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಏನು ಕೊಡುಗೆ ನೀಡಬಹುದು ಎನ್ನುವ ಕುರಿತು ಚಿಂತಿಸಿ ರಾಜ್ಯಕ್ಕೆ ಆಗಬಹುದಾದ ಹಲವು ಪ್ರಯೋಜನಗಳನ್ನು ಇವರಿಂದ ಪಡೆಯಬಹುದು. ಮಾತ್ರವಲ್ಲ ಇವರ ಮೂಲಕ ಕರ್ನಾಟಕವನ್ನು ದೆಹಲಿಯಲ್ಲಿ ಪ್ರತಿನಿಧಿಸುವ ಕೆಲಸ ಕಾರ್ಯವನ್ನು ಹಮ್ಮಿಕೊಳ್ಳಬಹುದು. ರಾಷ್ಟ್ರದ ರಾಜಧಾನಿಯಲ್ಲಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯನ್ನು ನವದೆಹಲಿಯಲ್ಲಿ ಸ್ಥಾಪಿಸುವುದು ಇಂದಿನ ಕಾಲ ಘಟ್ಟದಲ್ಲಿ ಅತ್ಯಂತ ಸೂಕ್ತ ಹಾಗೂ ಸಮಂಜಸವಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹಲವಾರು ಪ್ರವಾಸಿಗರನ್ನು ಕರ್ನಾಟಕ ರಾಜ್ಯವು ಆಕರ್ಷಿಸುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ರಾಜಧಾನಿ ಕೇಂದ್ರ ಬಿಂದುವಾಗಿದೆ. ಕರ್ನಾಟಕ ಪ್ರವಾಸೋಧ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡುತ್ತಿದೆ.

Advertisement

 ಕರ್ನಾಟಕದಲ್ಲಿ ನೂರಾರು ಪ್ರೇಕ್ಷಣೀಯ ಸ್ಥಳಗಳಿವೆ. ದೇಶ ಹಾಗೂ ವಿದೇಶದಿಂದ ಪ್ರವಾಸಿಗರನ್ನು ಸೆಳೆದು ರಾಜ್ಯದ ಪ್ರವಾಸೋಧ್ಯಮ ಅಭಿವೃದ್ಧಿಯಾಗಬೇಕಾದರೆ, ನವದೆಹಲಿಯಂತಹ ಪ್ರದೇಶದಲ್ಲಿ ಪ್ರವಾಸೋಧ್ಯಮ ಕಚೇರಿ ಹೊಂದುವುದು ಅತ್ಯವಶ್ಯಕ. ದೇಶದ ಬಹುತೇಕ ಎಲ್ಲಾ ರಾಜ್ಯಗಳು ಪ್ರವಾಸೋಧ್ಯಮ ಇಲಾಖೆಯ ಕಚೇರಿಗಳನ್ನು ಹೊಂದಿವೆ. ಆದರೆ  ರಾಜ್ಯದ ಪ್ರವಾಸೋಧ್ಯಮ ಇಲಾಖೆ ಕಚೇರಿಯು ಇರುವುದಿಲ್ಲ. ದೆಹಲಿಯಲ್ಲಿ ರಾಜ್ಯ ಪ್ರವಾಸೋಧ್ಯಮ ಕಚೇರಿ ಸ್ಥಾಪಿಸುವುದು  ಅವಶ್ಯಕವಾಗಿದೆ. ರಾಜ್ಯ ಸರ್ಕಾರವು ಈ ಕುರಿತು ತತ್‌ಕ್ಷಣ ಸ್ಪಂದಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧೀನ ಕಚೇರಿಯನ್ನು ದೆಹಲಿಯಲ್ಲಿ ಪ್ರಾರಂಭಿಸಿ ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ ಮತ್ತು ಅಗತ್ಯತೆಯನ್ನು ಪೂರೈಸಬೇಕು ಎಂದು ದೆಹಲಿ ಕರ್ನಾಟಕ ಸಂಘವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಿತು.

Advertisement

Udayavani is now on Telegram. Click here to join our channel and stay updated with the latest news.

Next