ನವದೆಹಲಿ: ಹೆಣ್ಣು ಮಕ್ಕಳು ಕೂದಲ ಬಗ್ಗೆ ಭಾವನಾತ್ಮಕವಾಗಿರುತ್ತಾರೆ. ಹೀಗಿರುವಾಗ ಹೇರ್‌ಕಟ್ ಹೇಳಿದ್ದೊಂದು, ಮಾಡಿದ್ದೊಂದು ಆದರೆ ಅವರು ಸುಮ್ಮನಿರುತ್ತಾರಾ?
ಮಾಡೆಲ್‌ವೊಬ್ಬರ ಹೇರ್‌ಸ್ಟೈಲ್ ಮಾಡುವಾಗ ಎಡವಟ್ಟು ಮಾಡಿಕೊಂಡ ಸೆಲೂನ್ ಈಗ ಬರೋಬ್ಬರಿ 2 ಕೋಟಿ ರೂಪಾಯಿ ನಷ್ಟ ತುಂಬಿಕೊಡಬೇಕಾದ ಪೇಚಿಗೆ ಸಿಲುಕಿದೆ!
ದೆಹಲಿಯ ಹೋಟೆಲ್ ಸಮೂಹದ ಸೆಲೂನ್‌ವೊಂದು ಮಾಡೆಲ್ ಒಬ್ಬರು ಹೇಳಿದ ಸ್ಟೈಲ್ ಬಿಟ್ಟು ಬೇರೊಂದು ಸ್ಟೈಲ್‌ನಲ್ಲಿ ಕೂದಲು ಕತ್ತರಿಸಿತ್ತು. ಪ್ಯಾಂಟೀನ್ ಮತ್ತು ವಿಎಲ್‌ಸಿಸಿ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮಾಡಿದ್ದ ಮಾಡೆಲ್ 2018ರಲ್ಲಿ ಸೆಲೂನ್‌ಗೆ ಹೋಗಿದ್ದರು. ಯಾವಾಗಲೂ ತಮಗೆ ಹೇರ್ ಸ್ಟೈಲ್ ಮಾಡುತ್ತಿದ್ದ ಹೇರ್ ಸ್ಟೈಲಿಸ್ಟ್ ಇಲ್ಲವಾದ್ದರಿಂದ, ಅದೇ ಸೆಲೂನ್‌ನ ಬೇರೊಬ್ಬ ಸ್ಟೈಲಿಸ್ಟ್ ಬಳಿ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ.
ಕೂದಲಿನ ತುದಿಯ ನಾಲ್ಕು ಇಂಚು ಕತ್ತರಿಸು ಎಂದು ಹೇಳಿದರೆ, ಸ್ಟೈಲಿಸ್ಟ್ ಕೇವಲ 4 ಇಂಚು ಕೂದಲು ಬಿಟ್ಟು ಉದ್ದದ ಕೂದಲನ್ನು ಕತ್ತರಿಸಿ ಹಾಕಿದ್ದಾರೆ. ಅದರಿಂದಾಗಿ ಮಾಡೆಲ್‌ಗೆ ಹಲವು ಮಾಡೆಲಿಂಗ್ ಆಫರ್‌ಗಳು ಕೈತಪ್ಪಿದ್ದು, ಕೆಲಸವೂ ಕಳೆದುಕೊಳ್ಳಬೇಕಾಯಿತಂತೆ! ಜತೆಗೆ, ಗಿಡ್ಡ ಕೂದಲಿನಿಂದಾಗಿ ನನ್ನ ಆತ್ಮವಿಶ್ವಾಸವೂ ಕುಂದಿದ್ದು, ಸಾಮಾಜಿಕವಾಗಿ ಯಾರೊಂದಿಗೂ ಬೆರೆಯಲಾರದಷ್ಟು ಮಾನಸಿಕವಾಗಿ ಕುಗ್ಗಿಹೋಗಿದ್ದೆ ಎಂದು ಮಾಡೆಲ್ ಆರೋಪಿಸಿದ್ದಾರೆ.
ಇದನ್ನೂ ಓದಿ:ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು
ತಮ್ಮ ಕೆಲಸಕ್ಕೆ ಕುತ್ತು ತಂದ ಸಲೂನ್ ವಿರುದ್ಧ ಅವರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)ಕ್ಕೆ ದೂರು ನೀಡಿದ್ದು, ಅದರ ತೀರ್ಪು ಗುರುವಾರ ಬಂದಿದೆ. ಮಾಡೆಲ್‌ಗೆ 2 ಕೋಟಿ ರೂ. ಪರಿಹಾರ ನೀಡುವಂತೆ ಸೆಲೂನ್‌ಗೆ ಆಯೋಗ ಸೂಚಿಸಿದೆ.