ಹೊಸದಿಲ್ಲಿ: ಪತಿಗೆ ಸೇರದ ವೀರ್ಯವನ್ನು ಬಳಸಿ ಮಹಿಳೆಯ ಮೇಲೆ ಇನ್-ವಿಟ್ರೊ ಫರ್ಟಿಲೈಸೇಶನ್ (IVF) ಪ್ರಕ್ರಿಯೆಯನ್ನು ನಡೆಸಿದ ಪಶ್ಚಿಮ ದೆಹಲಿಯ ಆಸ್ಪತ್ರೆಯೊಂದು 15 ವರ್ಷಗಳ ಹಿಂದಿನ ಪ್ರಕರಣದಲ್ಲಿ 1.5 ಕೋಟಿ ರೂಪಾಯಿ ದಂಡ ತೆರಬೇಕಾಗಿದೆ. ನಿರ್ಲಕ್ಷ್ಯದ ಬಗ್ಗೆ ತಿಳಿದ ನಂತರ ಮಹಿಳೆಯ ಪತಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು (ಎನ್‌ಸಿಡಿಆರ್‌ಸಿ) ಸಂಪರ್ಕಿಸಿದ್ದರು.
ಪೋಷಕರ ಮನವಿಯನ್ನು ಆಲಿಸಿದ ನ್ಯಾಯಾಲಯ, ಭಾಟಿಯಾ ಗ್ಲೋಬಲ್ ಆಸ್ಪತ್ರೆ ಮತ್ತು ಎಂಡೋಸರ್ಜರಿ ಸಂಸ್ಥೆ, ಅದರ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಒಟ್ಟಾಗಿ ಕುಟುಂಬಕ್ಕೆ 1 ಕೋಟಿ ರೂ. ನೀಡುವಂತೆ, ಎನ್‌ಸಿಡಿಆರ್‌ಸಿಯ ಗ್ರಾಹಕ ಸಹಾಯ ನಿಧಿಗೆ ಹೆಚ್ಚುವರಿ 20 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಆಸ್ಪತ್ರೆಯ ವೈದ್ಯರು ಸೇರಿದಂತೆ ಮೂವರಿಗೆ ದೂರುದಾರರಿಗೆ ತಲಾ 10 ಲಕ್ಷ ರೂ.ನೀಡುವಂತೆ ಆದೇಶಿಸಿದೆ.
ದಂಡ ಪಾವತಿಸಲು ಆರು ವಾರಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿದ್ದು, ದೂರುದಾರರು ಈ ಅವಧಿಯೊಳಗೆ ಮೊತ್ತವನ್ನು ಸ್ವೀಕರಿಸದಿದ್ದರೆ, ಶೇಕಡಾ 8 ರಷ್ಟು ವಾರ್ಷಿಕ ಬಡ್ಡಿಯನ್ನು ದಂಡವಾಗಿ ವಿಧಿಸಲಾಗುವುದು ಎಂದು ಹೇಳಿದೆ. ಹೆಚ್ಚುವರಿಯಾಗಿ, ಅವಳಿ ಮಕ್ಕಳಿಗಾಗಿ ಸುಮಾರು 1.5 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ಮಾಡುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ. ಪ್ರತಿ ಮಗುವಿಗೆ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ.
2008-2009 ರಲ್ಲಿ, ಐವಿಎಫ್ ಕಾರ್ಯವಿಧಾನಕ್ಕೆ ಒಳಗಾದ ಮಹಿಳೆ ತನ್ನ ಡಿಎನ್ಎ ಪ್ರೊಫೈಲ್ ಅನ್ನು ಪರೀಕ್ಷಿಸಿದ್ದರು. ಅವಳಿಗಳಲ್ಲಿ ಒಂದು ಮಗುವಿಗೆ AB+ ರಕ್ತದ ಗುಂಪು ಇದ್ದು, ಪೋಷಕರ ರಕ್ತದ ಗುಂಪುಗಳು B ಪಾಸಿಟಿವ್ ಮತ್ತು O ನೆಗೆಟಿವ್ ಎಂದು ವರದಿ ಬಹಿರಂಗಪಡಿಸಿದೆ. ಐವಿಎಫ್ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಅನ್ನು ನಿರ್ಲಕ್ಷ್ಯದಿಂದ ನಡೆಸಲಾಗಿದೆ ಎಂದು ವರದಿಯು ಸಾಬೀತುಪಡಿಸಿದೆ.
ತನಗೆ, ತನ್ನ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಉಂಟಾದ ಮಾನಸಿಕ ಮತ್ತು ಆನುವಂಶಿಕ ದುಃಖವನ್ನು ಉಲ್ಲೇಖಿಸಿ, ತಂದೆ ಆಸ್ಪತ್ರೆಯಿಂದ 2 ಕೋಟಿ ರೂ. ಪರಿಹಾರವನ್ನು ಕೇಳಿದ್ದರು.