ನವದೆಹಲಿ: ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ದೆಹಲಿ ಹೈಕೋರ್ಟ್ ಗುರುವಾರ (ಮಾರ್ಚ್ 31) ವಜಾಗೊಳಿಸಿದೆ.
ಇದನ್ನೂ ಓದಿ:ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಕಾಳ್ಗಿಚ್ಚು ನಿಯಂತ್ರಣಕ್ಕೆ : 1000 ಹೆಕ್ಟೇರ್ ಅರಣ್ಯ ನಾಶ
ಹೈಕೋರ್ಟ್ ನ ಹಂಗಾಮಿ ಚೀಫ್ ಜಸ್ಟೀಸ್ ವಿಪಿನ್ ಸಾಂಘಿ ನೇತೃತ್ವದ ಪೀಠ, ವ್ಯಕ್ತಿಯೊಬ್ಬರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನೀಡುವಂತೆ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡುವುದಿಲ್ಲ ಎಂದು ಹೇಳಿದೆ.
ಇದು ಯಾವ ರೀತಿಯ ಮನವಿ? ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ಹೇಳಬೇಕೇ? ಎಂದು ಜಸ್ಟೀಸ್ ನವೀನ್ ಚಾವ್ಲಾ ಕೂಡಾ ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಕನಿಷ್ಠ ಪಕ್ಷ ಕೋರ್ಟ್ ಸರ್ಕಾರಕ್ಕೆ ಮನವಿ ಮಾಡಬಹುದಾಗಿದೆ ಎಂದರು.
“ನೀವೆ ಹೋಗಿ ಮನವಿ ಮಾಡಿಕೊಳ್ಳಿ, ಇದರಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಪ್ರಶ್ನೆ ಎಲ್ಲಿದೆ ಎಂದು ಹಂಗಾಮಿ ಚೀಫ್ ಜಸ್ಟೀಸ್ ಪ್ರತಿಕ್ರಿಯಿಸಿದ್ದಾರೆ. ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸುವುದಾಗಿ ಪೀಠ ಹೇಳಿದ ನಂತರ ಅರ್ಜಿದಾರರ ವಕೀಲರು ಅರ್ಜಿಯನ್ನು ವಾಪಸ್ ಪಡೆದಿರುವುದಾಗಿ ವರದಿ ತಿಳಿಸಿದೆ.