ನವದೆಹಲಿ : ಸ್ಟೀಲ್ ಪ್ಲ್ಯಾಂಟ್ ಹಾಗೂ ಪೆಟ್ರೋಲಿಯಂ ಪ್ಲ್ಯಾಂಟ್‍ಗಳಿಂದ ತಕ್ಷಣವೇ ಆಕ್ಸಿಜನ್ ಪಡೆದು ಆಸ್ಪತ್ರೆಗಳಿಗೆ ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಇಂದು ( ಬುಧವಾರ) ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಸಂಬಂಧಿಸಿದ್ದಂತೆ ತುರ್ತು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಸ್ಟೀಲ್ ಹಾಗೂ ಪೆಟ್ರೋಲಿಯಂ ಪ್ಲ್ಯಾಂಟ್‍ನಲ್ಲಿರುವ ಆಕ್ಸಿಜನ್‍ನ್ನು ತಮ್ಮ ಸುಪರ್ದಿಗೆ ಪಡೆದು,ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ನೀಡುವಂತೆ ಸೂಚಿಸಿದೆ. ಹಾಗೂ ಉತ್ಪಾದನಾ ಸ್ಥಳದಿಂದ ವಿತರಣಾ ಸ್ಥಳಕ್ಕೆ ಆಮ್ಲಜನಕದ ಸರಬರಾಜಿಗೆ ಸುರಕ್ಷಿತ ಮಾರ್ಗ ಕಲ್ಪಿಸಿ ಎಂದು ಹೇಳಿದೆ.
ನಮ್ಮ ಕಾಳಜಿ ದೆಹಲಿಗಷ್ಟೇ ಸೀಮಿತವಲ್ಲ, ಬದಲಾಗಿ ದೇಶದ ಪ್ರತಿ ಭಾಗಗಳಿಗೂ ಅನ್ವಯಿಸುತ್ತದೆ ಎಂದಿರುವ ನ್ಯಾಯಾಲಯ, ಆಕ್ಸಿಜನ್ ಪೂರೈಕೆಗೆ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದೆ.
ಇನ್ನು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಕೋರ್ಟ್, ವಾಸ್ತವತೆಯನ್ನು ಸರ್ಕಾರ ಮರೆತಂತೆ ವರ್ತಿಸುತ್ತಿದೆ. ಆಕ್ಸಿಜನ್ ಆಮದು ಮಾಡಿಕೊಳ್ಳುವಂತೆ ಮಂಗಳವಾರ ನಾವು ಸೂಚಿಸಿದ್ದೇವು. ಅದು ಏನಾಯಿತು ಎಂದು ಕೇಳಿರುವ ಕೋರ್ಟ್, ಇಂದು ಗಂಭೀರ ಸ್ವಭಾವದ ತುರ್ತು ಪರಿಸ್ಥಿತಿ ಎಂದು ಕಳವಳ ವ್ಯಕ್ತಪಡಿಸಿದೆ.
ನವದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ದೆಹಲಿಯಲ್ಲಂತೂ ಆಕ್ಸಿಜನ್ ಅಭಾವ ಜಾಸ್ತಿ ಇದೆ. ಈ ಹಿನ್ನೆಲೆ ಕೂಡಲೇ ಆಕ್ಸಿಜನ್ ಪೂರೈಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.