ನವದೆಹಲಿ: ಕಾಂಗ್ರೆಸ್ ಸಂಸದ ಶಶಿತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಎಸ್ ಐಟಿ ತನಿಖೆ ಮೇಲೆ ನ್ಯಾಯಾಲಯ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿ ಇದೊಂದು ರಾಜಕೀಯ ಪ್ರೇರಿತ ಅರ್ಜಿಯಾಗಿದೆ ಎಂದು ಹೇಳಿದೆ.
ಜಸ್ಟೀಸ್ ಎಸ್ ಮುರಳೀಧರ್ ಹಾಗೂ ಐಎಸ್ ಮೆಹ್ತಾ ಅವರಿದ್ದ ಹೈಕೋರ್ಟ್ ಪೀಠ, ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಪಿಐಎಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ತನಿಖೆಯ ಮೇಲೆ ಯಾರೋ ಪ್ರಭಾವ ಬೀರುತ್ತಾರೆ ಎಂಬುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಈಗಾಗಲೇ ನ್ಯಾಯಾಲಯ ಏನು ಆದೇಶಿಸಿತ್ತೋ ಅದರಂತೆ ತನಿಖೆ ನಡೆಯಬೇಕು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ, ಎಸ್ ಐಟಿ ತನಿಖೆ ನಡೆಸುತ್ತಿದೆ. ಸುನಂದಾ ಪುಷ್ಕರ್ ಪತಿ ಶಶಿ ತರೂರ್ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯಸಲ್ಲಿ ಭಾಗಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು.
ಪುಷ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಾಗೂ ಶಶಿತರೂರ್ ವಿರುದ್ಧ ಸ್ವಾಮಿ ಮಾಡಿರುವ ಆರೋಪದ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿ, ಯಾವ ಆಧಾರದ ಮೇಲೆ ಆರೋಪಿಸಿದ್ದೀರಿ, ಈ ಬಗ್ಗೆ ಮೂಲವನ್ನು ಅಫಿಡವಿತ್ ಮೂಲಕ ಸಲ್ಲಿಸುವಂತೆ ಸೂಚಿಸಿತ್ತು.
ಏತನ್ಮಧ್ಯೆ ಸುಬ್ರಮಣಿಯನ್ ಸ್ವಾಮಿ ಆರೋಪದ ಬಗ್ಗೆ ತನ್ನ ಬಳಿ ಯಾವುದೇ ಡಾಟಾ ಅಥವಾ ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಸ್ಪಷ್ಟ ದಾಖಲೆ ಬೇಕೆಂದು ಕೋರ್ಟ್ ಕೇಳಿದ್ದಾಗ ತಾನು ಅಫಿಡವಿತ್ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕೆಂದು ಕೇಳಿದ್ದರು. ನ್ಯಾಯಾಂಗ ಪ್ರಕ್ರಿಯ ಬಗ್ಗೆ ಜಾಗ್ರತೆಯಾಗಿರಬೇಕು, ತಮ್ಮದೇ ರಾಜಕೀಯ ಲಾಭಕ್ಕಾಗಿ ರಾಜಕೀಯ ವ್ಯಕ್ತಿಗಳು ಇದನ್ನು ಬಳಸಿಕೊಳ್ಳಬಾರದು ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.