ನವದೆಹಲಿ: ನಿರಾಶ್ರಿತ ರೋಹಿಂಗ್ಯಾಗಳ ಮಕ್ಕಳ ಶಾಲೆ ಸೇರ್ಪಡೆಗೆ ಅನುಮತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಅ.30) ವಜಾಗೊಳಿಸಿದೆ.
ಎನ್ ಜಿಒವೊಂದರ ಸಾಮಾಜಿಕ ಕಾರ್ಯಕರ್ತ ಪಿಐಎಲ್ ಸಲ್ಲಿಸಿದ್ದು, ನಿರಾಶ್ರಿತ ರೋಹಿಂಗ್ಯಾಗಳ ಮಕ್ಕಳಿಗೆ ಶಾಲಾ ಪ್ರವೇಶಾತಿ ನಿರಾಕರಿಸುವುದು ಅವರ ಮೂಲಭೂತ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಲಿದೆ. ಅಲ್ಲದೇ ಭಾರತೀಯ ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯ್ದೆ 2009ರ ಉಲ್ಲಂಘನೆ ಎಂಬುದಾಗಿ ವಾದಿಸಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ನೇತೃತ್ವದ ಹೈಕೋರ್ಟ್ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯನ್ನು ವಜಾಗೊಳಿಸಿರುವುದಾಗಿ ದ ಹಿಂದೂ ವರದಿ ಮಾಡಿದೆ.
ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಈ ವಿಷಯವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ.
ಈ ವಿಚಾರವನ್ನು ಇನ್ನೂ ಮುಂದಕ್ಕೆ ಒಯ್ಯುವುದು ಬೇಡ. ಮಗು ಎಂದರೆ ಇಡೀ ಜಗತ್ತು ಇಲ್ಲಿಗೆ ಬರುತ್ತದೆ ಎಂದಲ್ಲ. ಇವು ಅಂತಾರಾಷ್ಟ್ರೀಯ ಸಮಸ್ಯೆಗಳು, ಭದ್ರತೆ, ರಾಷ್ಟ್ರೀಯತೆ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ಕೋರ್ಟ್ ವಿಚಾರಣೆ ಪ್ರಕ್ರಿಯೆ ಉಲ್ಲೇಖಿಸಿ ವರದಿ ಮಾಡಿದೆ.