ನವದೆಹಲಿ:”ಜಾರಿ ನಿರ್ದೇಶನಾಲಯದಿಂದ ಸ್ತಂಭನಗೊಂಡಿರುವ ನಿಮ್ಮ ವಿವಿಧ ಬ್ಯಾಂಕ್ ಖಾತೆಗಳು ಮತ್ತೆ ಚಾಲ್ತಿಗೊಳ್ಳಬೇಕೆಂದರೆ ಒಂದು ವಾರದೊಳಗಾಗಿ 950 ಕೋಟಿ ರೂ.ಗಳ ಬ್ಯಾಂಕ್ ಖಾತ್ರಿಯನ್ನು ಒದಗಿಸಿ.’
ಇದು ಹಣಕಾಸು ಅಕ್ರಮ ಸಾಗಣೆ ಆರೋಪ ಎದುರಿಸುತ್ತಿರುವ ಚೀನದ ಸ್ಮಾರ್ಟ್‌ಫೋನ್ ಕಂಪನಿ ವಿವೋಗೆ ದೆಹಲಿ ಹೈಕೋರ್ಟ್ ನೀಡಿರುವ ಸೂಚನೆ.
ತನ್ನ ಖಾತೆಗಳನ್ನು ಸ್ತಂಭನಗೊಳಿಸಿ ನೀಡಿರುವ ಆದೇಶವನ್ನು ರದ್ದು ಮಾಡುವಂತೆ ಕೋರಿ ವಿವೋ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಜತೆಗೆ, ರವಾನಿಸಲಾದ ಮೊತ್ತದ ಕುರಿತ ವಿವರಗಳನ್ನು ಇಡಿಗೆ ಸಲ್ಲಿಸಬೇಕು, ಸ್ತಂಭನಗೊಳ್ಳುವ ವೇಳೆ ಖಾತೆಗಳಲ್ಲಿದ್ದ 251 ಕೋಟಿ ರೂ.ಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು,
ಮುಂದಿನ ಆದೇಶದವರೆಗೆ ಆ ಮೊತ್ತವನ್ನು ಬಳಸಿಕೊಳ್ಳಬಾರದು ಎಂದೂ ಸೂಚಿಸಿದೆ. ಇದೇ ವೇಳೆ, ವಿವೋ ಮನವಿಗೆ ಪ್ರತಿಕ್ರಿಯಿಸಲು ಇ.ಡಿ.ಗೆ ಒಂದು ವಾರ ಕಾಲಾವಕಾಶವನ್ನು ನೀಡಿದ ಹೈಕೋರ್ಟ್, ಜು.28ಕ್ಕೆ ವಿಚಾರಣೆಯನ್ನು ಮುಂದೂಡಿದೆ.