ದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಗ್ರೀನ್ ಪಾರ್ಕ್ ಮಸೀದಿ ಇದೀಗ ಕೋವಿಡ್ ರೋಗಿಗಳ ಆರೈಕೆ ಕೇಂದ್ರವಾಗಿ ಬದಲಾಗಿದೆ.
ನವದೆಹಲಿಯಲ್ಲಿ ಕೋವಿಡ್ ಎರಡನೇ ಅಲೆ ಮಿತಿಮೀರಿ ವ್ಯಾಪಿಸುತ್ತಿದೆ. ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಏರಿಕೆ ನಾಗಾಲೋಟ ಪಡೆದುಕೊಂಡಿದೆ. ಇದೇ ಹೊತ್ತಿನಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಸಹ ಎದುರಾಗಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕ್ರೀಡಾಂಗಣ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳನ್ನು ಕೋವಿಡ್ ರೋಗಿಗಳ ಆರೈಕೆ ಕೇಂದ್ರಗಳನ್ನಾಗಿ ಮಾರ್ಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಲ್ಲಿಯ ಸರ್ಕಾರದ ಜೊತೆ ಕೈ ಜೋಡಿಸಿರುವ ಗ್ರೀನ್ ಪಾರ್ಕ್ ಮಸೀದಿ, ಪ್ರಾರ್ಥನೆ ಸಲ್ಲಿಸುವ ಜಾಗವನ್ನು ಕೋವಿಡ್ ರೋಗಿಗಳ ಆರೈಕೆಗೆ ಬಿಟ್ಟು ಕೊಟ್ಟಿದೆ.
ಮಸೀದಿಯಲ್ಲಿ 10 ಬೆಡ್‍ಗಳನ್ನು ಹಾಕಲಾಗಿದೆ. ಕೋವಿಡ್ ರೋಗಿಗಳಿಗೆ ಔಷಧಿ, ಮಾಸ್ಕ್, ಸಾನಿಟೈಸ್, ಹಾಗೂ ಪಿಪಿಇ ಕಿಟ್‍ಗಳನ್ನು ನೀಡಲಾಗುತ್ತಿದೆ. ಅದೇ ರೀತಿ ರೋಗಿಗಳಿಗೆ ಊಟವನ್ನು ಒದಗಿಸಲಾಗುತ್ತದೆ ಎಂದು ಮಸೀದಿಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಬೆಡ್‍ಗಳ ಕೊರತೆ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿಕೊಂಡಿದ್ದು. ಕೂಡಲೇ ಬೆಡ್ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಕೇಂದ್ರ ಸರ್ಕಾರ ಕೂಡ ಬೆಡ್ ನೀಡಿದ್ದು, ಕೆಲವು ಸಂಘ-ಸಂಸ್ಥೆಗಳು ಕೋವಿಡ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿವೆ.