ತೀರ್ಪಿನ ಬೆನ್ನಲ್ಲೇ ಡಿಸಿಎಂ ಮನೀಶ್ ಸಿಸೊಡಿಯಾ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಿಎಂ ಕೇಜ್ರಿವಾಲ್‌ರ ನಿರ್ಧಾರವೇ ಅಂತಿಮ ಎಂಬ ಕಡತವನ್ನು ಸೇವಾ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದು, ಅದನ್ನು ಇಲಾಖೆ ವಾಪಸ್ ಕಳುಹಿಸಿದೆ. ಅದು ಕಾನೂನಿನ ಅನ್ವಯ ಸಮರ್ಪಕವಾಗಿಲ್ಲ ಎಂಬ ಕಾರಣವನ್ನೂ ನೀಡಿದೆ. ಈ ಬೆಳವಣಿಗೆ ಮತ್ತೂಂದು ಸುತ್ತಿನ ಕಾನೂನು ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ.
Advertisement
ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಆಪ್ ಸರಕಾರ ಚಿಂತನೆ ನಡೆಸುತ್ತಿದೆ. ಆದರೆ, ಅಧಿಕಾರಿಗಳ ವರ್ಗಾವಣೆ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರದ್ದೇ ಪರಮಾಧಿಕಾರ ಎಂದು ಕೇಂದ್ರ ಗೃಹ ಇಲಾಖೆ 2015ರ ಮೇನಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಕೋರ್ಟ್ ತಿರಸ್ಕರಿಸಿಲ್ಲ ಎನ್ನುವುದು ಅಧಿಕಾರಿಗಳ ವಾದ.
ಸುಪ್ರೀಂ ತೀರ್ಪನ್ನು ಆಪ್ ಪಕ್ಷದ ಸರಕಾರ ತಪ್ಪಾಗಿ ಗ್ರಹಿಸಿದೆ. ಕೇಂದ್ರಕ್ಕೇ ಹೆಚ್ಚಿನ ಅಧಿಕಾರವಿದೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸುಪ್ರೀಂ ತನ್ನ ತೀರ್ಪಿನಲ್ಲಿ ರಾಜ್ಯ ಸರಕಾರಕ್ಕೆ ಹೆಚ್ಚುವರಿಯಾಗಿ ಏನನ್ನೂ ನೀಡಿಲ್ಲ ಅಥವಾ ಕೇಂದ್ರಕ್ಕೆ ಹಾಲಿ ಇರುವ ಅಧಿಕಾರ ಮೊಟಕುಗೊಳಿಸಿಲ್ಲ. ಅದು ಕೇವಲ ಚುನಾಯಿತ ಸರಕಾರದ ಮಹತ್ವದ ಬಗ್ಗೆ ಮಾತ್ರ ಪ್ರಸ್ತಾಪಿಸಿದೆ. ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿ ರುವುದರಿಂದ ಅದರ ಅಧಿಕಾರ ಕೇಂದ್ರಕ್ಕೇ ಹೆಚ್ಚಾಗಿರುತ್ತದೆ ಎಂದು ಫೇಸ್‌ಬುಕ್‌ನಲ್ಲಿ ಜೇಟ್ಲಿ ಬರೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಚುನಾಯಿತ ಸರಕಾರದ ಅಧಿಕಾರ ಒಪ್ಪಿಕೊಳ್ಳಬೇಕು. ಯಾವುದೇ ವಿಷಯವಿದ್ದರೂ ಲಿಖೀತ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೇಂದ್ರ ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ ಜೇಟ್ಲಿ . ಇದರ ಜತೆಗೆ ಹಿಂದಿನ ಪ್ರಕರಣಗಳ ಕುರಿತಾಗಿ ದೆಹಲಿ ಸರಕಾರ ತನಿಖಾ ಸಂಸ್ಥೆಗಳನ್ನು ರಚಿಸಿ ವಿಚಾರಣೆ ಅಥವಾ ತನಿಖೆಗೆ ಆದೇಶ ನೀಡುವ ಹಾಗಿಲ್ಲ ಎಂದೂ ಹೇಳಿದ್ದಾರೆ.