ನವದೆಹಲಿ: ಏರುತ್ತಿರುವ ತಾಪಮಾನದ ನಡುವೆ ನಾಗರಿಕರು ನೀರಿನ ಕೊರತೆಯ ತೀವ್ರತೆಯನ್ನು ಎದುರಿಸುತ್ತಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬೇಡಿಕೆಯ ಕುರಿತು ದೆಹಲಿ ಸರಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
ದೆಹಲಿ ಸರ್ಕಾರವು ಕೋರ್ಟ್ ಗೆ ನೀಡಿದ ತನ್ನ ಅರ್ಜಿಯಲ್ಲಿ ‘ಬಿಸಿಗಾಳಿ ಪರಿಸ್ಥಿತಿಗಳಿಂದಾಗಿ ನಗರದಲ್ಲಿ ನೀರಿನ ಬೇಡಿಕೆ ಗಣನೀಯವಾಗಿ ಏರಿದೆ ಮತ್ತು ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ದೆಹಲಿಗೆ ಪೂರೈಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ, ದೆಹಲಿಯು ತೀವ್ರತರವಾದ ಶಾಖದ ಪರಿಸ್ಥಿತಿಗಳಿಗೆ ಸಾಕ್ಷಿಯಾಗಿದೆ, ನಗರದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ಅಂದರೆ 50 ಡಿಗ್ರಿ-ಸೆಲ್ಸಿಯಸ್ ಹಂತ ತಲುಪಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ನೀರಿನ ಸಮಸ್ಯೆ ತಲೆದೂರಿದೆ ಇದಕ್ಕೆ ಪ್ರತಿಯಾಗಿ ದೆಹಲಿ ಸರ್ಕಾರವು ಕಾರು ತೊಳೆಯಲು ಕುಡಿಯುವ ನೀರಿನ ದುರ್ಬಳಕೆ ಮಾಡಿದವರಿಗೆ ದಿಲ್ಲಿ ಜಲ ಮಂಡಳಿ (ಡಿಜೆಬಿ) 2,000 ರೂ. ದಂಡ ವಿಧಿಸುವ ನಿರ್ಧಾರಕ್ಕೆ ಮುಂದಾಗಿತ್ತು.
ನೀರಿನ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ದೆಹಲಿ ಜಲ ಮಂಡಳಿ ವಾರ್ ರೂಮ್ ಸ್ಥಾಪಿಸಲಾಗಿದೆ ಎಂದು ಸಚಿವೆ ಅತಿಶಿ ಹೇಳಿದ್ದಾರೆ. ಆದರೆ ಹರಿಯಾಣ ಸರಕಾರ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುತ್ತಿಲ್ಲ ಹಾಗಾಗಿ ನೀರಿನ ಸಮಸ್ಯೆ ತಲೆದೂರಿದೆ ಎಂದು ಆರೋಪಿಸಿದರು. ತಮ್ಮ ಪ್ರದೇಶದಲ್ಲಿ ನೀರಿನ ಟ್ಯಾಂಕರ್ ಅಗತ್ಯವಿರುವವರು ಸಹಾಯಕ್ಕಾಗಿ 1916 ಗೆ ಡಯಲ್ ಮಾಡಬಹುದು ಎಂದು ಅವರು ಹೇಳಿದರು.
ಈ ನಡುವೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ನಾಯಕರು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರ ರಾಜಧಾನಿಯಲ್ಲಿನ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
“ಈ ಬಿಸಿಲಿನ ಬೇಗೆಯಲ್ಲಿ ನೀರಿನ ಬೇಡಿಕೆ ತುಂಬಾ ಹೆಚ್ಚಾಗಿದೆ, ದೆಹಲಿ ನೆರೆಯ ರಾಜ್ಯಗಳಿಂದ ಪಡೆಯುತ್ತಿದ್ದ ನೀರನ್ನೂ ಕಡಿಮೆ ಮಾಡಲಾಗಿದೆ, ಅಂದರೆ ಬೇಡಿಕೆ ತುಂಬಾ ಹೆಚ್ಚಾಗಿದೆ ಮತ್ತು ಪೂರೈಕೆ ಕಡಿಮೆಯಾಗಿದೆ. ನಾವೆಲ್ಲರೂ ಸಹೋದ್ಯೋಗಿಗಳು ನಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ಬಿಟ್ಟು ನೀರಿನ ಸಮಸ್ಯೆ ಬಗೆಹರಿಸೋಣ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.