ಚೆನ್ನೈ: ‘ದಿ ಡೆಲ್ಲಿ ಫೈಲ್ಸ್’ ಚಿತ್ರ ತಮಿಳುನಾಡಿನ ಬಗ್ಗೆ ಸಾಕಷ್ಟು ಸತ್ಯವನ್ನು ಹೇಳುತ್ತದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.
ಭಾನುವಾರ ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ”ಚಿತ್ರ ಕೇವಲ ದೆಹಲಿಯ ಬಗ್ಗೆ ಅಲ್ಲ, ಇಷ್ಟು ವರ್ಷಗಳಿಂದ ದೆಹಲಿ ಭಾರತವನ್ನು ಹೇಗೆ ನಾಶಪಡಿಸುತ್ತಿದೆ ಎಂಬುದನ್ನು ತೋರಿಸುತ್ತದೆ, ದೆಹಲಿಯಲ್ಲಿ ದೇಶವನ್ನು ಆಳಿದವರು ಮೊಘಲ್ ರಾಜರಿಂದ ಹಿಡಿದು ಬ್ರಿಟಿಷರಿಂದ ಆಧುನಿಕ ಕಾಲದವರೆಗೆ ಎಲ್ಲವನ್ನೂ ಹೇಗೆ ನಾಶಪಡಿಸಿದರು ಎನ್ನುವ ಕಥೆ ಚಿತ್ರದ್ದು” ಎಂದು ಹೇಳಿದ್ದಾರೆ.
‘ಇತಿಹಾಸವನ್ನು ಜನರಿಗೆ ಕಲಿಸಿದರೆ, ಸತ್ಯಗಳನ್ನು ಹೇಳಿದರೆ ಜನರು ಎದ್ದು ನಿಲ್ಲುತ್ತಾರೆ ಮತ್ತು ಅವರು ನ್ಯಾಯವನ್ನು ಹುಡುಕುತ್ತಾರೆ. ಆಗ ಸರ್ಕಾರಗಳು ಬಾಗುತ್ತವೆ’ ಎಂದು ಕಾಂಗ್ರೆಸ್ ವಿರುದ್ಧವೂ ಆಕ್ರೋಶ ಹೊರ ಹಾಕಿದರು.
ಕಾಶ್ಮೀರ ಪಂಡಿತರ ಯಾತನೆಯ ಕಥೆಯ ಬಳಿಕ, 1984 ರ ಗಲಭೆಗಳನ್ನು ಆಧರಿಸಿ ಚಿತ್ರ ಮಾಡಲು ಹೊರಟಿರುವ ಅಗ್ನಿಹೋತ್ರಿ ಅವರಿಗೆ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಗ್ನಿಹೋತ್ರಿ ನಿರ್ದೇಶಿಸಿದ ‘ ದಿ ಕಾಶ್ಮೀರ್ ಫೈಲ್ಸ್’ ಗಲ್ಲಾಪೆಟ್ಟಿಗೆಯ ಮಾತ್ರವಲ್ಲದೆ ರಾಜಕೀಯವಾಗಿಯೂ ಹಿಂದೆಂದೂ ಕಂಡಿರದ ಭರ್ಜರಿ ಪ್ರಚಾರ ಮತ್ತು ಯಶಸ್ಸು ಗಳಿಸಿತ್ತು, ಮಾತ್ರವಲ್ಲದೆ ವಿವಾದವನ್ನು ಉಂಟುಮಾಡಿತ್ತು. ಕೆಲವು ವಿಮರ್ಶಕರು ಮತ್ತು ಲೇಖಕರು ರಾಜಕೀಯಕ್ಕಾಗಿ ಚಲನಚಿತ್ರವನ್ನು ಎಳೆದು ತಂದರೂ 330 ಕೋಟಿಗೂ ಹೆಚ್ಚು ಹಣವನ್ನು ಗಳಿಸುವ ಮೂಲಕ ಗಲ್ಲಾಪೆಟ್ಟಿಗೆ ಸೂರೆಗೈದಿತ್ತು.